ಬೆಂಗಳೂರು: ಶಾಲೆಗಳ ಮಾನ್ಯತೆ ನವೀಕರಣಕ್ಕೆ ಶಾಲಾ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ. 2023 -24 ನೇ ಸಾಲಿನಲ್ಲಿ ಮತ್ತು ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಮಾನ್ಯತೆ ನವೀಕರಿಸಿಕೊಳ್ಳದ ಖಾಸಗಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆಯಿಂದ ಅವಕಾಶ ಕಲ್ಪಿಸಲಾಗಿದೆ.
ಒಂದು ಬಾರಿಗೆ ಮಾತ್ರ ಮಾನ್ಯತೆ ನವೀಕರಣದ ಷರತ್ತು ವಿಧಿಸಿ ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಈ ಅವಕಾಶ ಬಳಸಿಕೊಂಡು ಶಾಲೆ ಆಡಳಿತ ಮಂಡಳಿಗಳು ಬಾಕಿ ಇರುವ ಅವಧಿಗೆ ಘಟನೋತ್ತರ ಮಾನ್ಯತೆ ಪಡೆಯಲು ಕ್ರಮವಹಿಸುವಂತೆ ತಿಳಿಸಲಾಗಿದೆ. ಈ ಅವಧಿಯ ನಂತರವೂ ಪ್ರಥಮ ಮಾನ್ಯತೆ ನವೀಕರಣ ಪಡೆಯದ ಖಾಸಗಿ ಶಾಲೆಗಳಿಗೆ ನೋಂದಣಿ ರದ್ದುಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೈಪಿಡಿಯನ್ನು ಮಾನ್ಯತೆ ನವೀಕರಣ ತಂತ್ರಾಂಶದ ಲಾಗಿನ್ ಪುಟದಲ್ಲಿ ಅಳವಡಿಸಲಾಗಿದೆ. ಅರ್ಜಿ ಸಲ್ಲಿಕೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಅಗತ್ಯ ಮಾಹಿತಿಗಳೊಂದಿಗೆ ಸಮಸ್ಯೆಯನ್ನು ಇ-ಮೇಲ್(glaprimarycpi@mail.com) ಮೂಲಕ ಸಲ್ಲಿಸಬಹುದು.
ಏಪ್ರಿಲ್ 28 ರಿಂದ ಮೇ 13 ರವರೆಗೆ ಅರ್ಜಿ ಸಲ್ಲಿಸಲು ಸಮಯ ನೀಡಲಾಗಿದೆ. ಸ್ವೀಕರಿಸಿದ ಅರ್ಜಿಗಳನ್ನು ಇತ್ಯರ್ಥಪಡಿಸಲು ಜೂನ್ 17 ಕೊನೆಯ ದಿನವಾಗಿದೆ ಎಂದು ಹೇಳಲಾಗಿದೆ.