ಬೆಂಗಳೂರು: ನೀಟ್ 2024ರ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ವೈದ್ಯಕೀಯ ಸೀಟ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಿಂಪಡೆದುಕೊಂಡಿದೆ.
ಶ್ರುತಿ ಪಾಂಡೆ ಅವರಿಗೆ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜು, ಪ್ರಿಯಾಲ್ ಚೌಹಾಣ್ ಅವರಿಗೆ ಮಂಗಳೂರಿನ ಎಜೆ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆತಿತ್ತು. ನೀಟ್ 2024ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ತನಿಖೆ ನಡೆಸಿದ ಸಿಬಿಐ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆದ ಈ ಇಬ್ಬರು ಭಾಗಿಯಾಗಿರುವುದನ್ನು ದೃಢಪಡಿಸಿತ್ತು.
ಸಿಬಿಐ ವರದಿ ಆಧಾರದಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗವು ಆಡಳಿತ ಮಂಡಳಿ ಕೋಟಾದಲ್ಲಿ ಪಡೆದ ಇಬ್ಬರ ಸೀಟುಗಳನ್ನು ರದ್ದುಪಡಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚನೆ ನೀಡಿತ್ತು. ಇವರಿಬ್ಬರು ಮೊದಲ ವರ್ಷದ ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. ಸೀಟು ರದ್ದು ಮಾಡಿರುವ ಆದೇಶವನ್ನು ಕಾಲೇಜು ಆಡಳಿತ ಮಂಡಳಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳುಹಿಸಿದೆ.