ನವದೆಹಲಿ: 10 ಲಕ್ಷ ರೂಪಾಯಿಗಿಂತ ಅಧಿಕ ಮೌಲ್ಯದ ಐಷಾರಾಮಿ ಉತ್ಪನ್ನಗಳಿಗೆ ಶೇಕಡ 1ರಷ್ಟು ಟಿಸಿಎಸ್(ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್) ಅನ್ವಯವಾಗಲಿದೆ.
10 ಲಕ್ಷ ರೂ.ಗಿಂತ ಅಧಿಕ ಮೌಲ್ಯದ ಬ್ಯಾಗ್, ವಾಚ್ ಗಳು, ಪಾದರಕ್ಷೆಗಳು ಮತ್ತು ಕ್ರೀಡಾ ಉಡುಪುಗಳ ಮೇಲೆ ಇನ್ನು ಮುಂದೆ ಶೇಕಡ 1ರಷ್ಟು ಟಿಸಿಎಸ್ ಅನ್ವಯವಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಮಂಗಳವಾರದಿಂದಲೇ ಇದು ಜಾರಿಗೆ ಬಂದಿದೆ. ಕಳೆದ ವರ್ಷದ ಬಜೆಟ್ ನಲ್ಲಿ ಐಷಾರಾಮಿ ವಸ್ತುಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಸ್ತಾಪವಿತ್ತು. 2025ರ ಜನವರಿ 1ರಿಂದಲೇ ಜಾರಿಗೊಳಿಸುವ ನಿರೀಕ್ಷೆ ಇತ್ತು. ಆದರೆ, ಈಗ ಅಧಿಸೂಚನೆ ಪ್ರಕಟಿಸಲಾಗಿದೆ.
ಮಾರಾಟಗಾರರು ನೇರವಾಗಿ ಖರೀದಿಸುವ ಗ್ರಾಹಕರಿಂದ ಈ ತೆರಿಗೆ ಪಡೆದು ಸರ್ಕಾರಕ್ಕೆ ಸಲ್ಲಿಸುತ್ತಾರೆ. ನಾಣ್ಯಗಳು, ಮತ್ತು ಅಂಚೆ ಚೀಟಿಗಳು, ಹೆಲಿಕಾಪ್ಟರ್, ಸನ್ ಗ್ಲಾಸ್, ಹೋಂ ಥಿಯೇಟರ್, ಕ್ರೀಡಾ ಉಡುಪು ಮೊದಲಾದವು ಈ ತೆರಿಗೆ ವ್ಯಾಪ್ತಿಗೆ ಬರುತ್ತವೆ. ವರ್ಷದ ಕೊನೆಯಲ್ಲಿ ಸಲ್ಲಿಸುವ ಐಟಿ ರಿಟರ್ನ್ಸ್ ವೇಳೆ ಇದನ್ನು ರೀಫಂಡ್ ಮೂಲಕ ಹಿಂಪಡೆಯಲು ಅವಕಾಶ ಇರುತ್ತದೆ ಎಂದು ಹೇಳಲಾಗಿದೆ.