ಬೆಂಗಳೂರು: ಹೊಸ ಮನೆ ಖರೀದಿ ವೇಳೆ ಮಾಡಿದ್ದ ಸಾಲ ತೀರಿಸಲು ತವರು ಮನೆಯಲ್ಲಿಯೇ ಕಳವು ಮಾಡಿದ್ದ ಪುತ್ರಿಯನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಗ್ಗದಾಸನಪುರ ನಿವಾಸಿ ಶೋಭಾ(36) ಬಂಧಿತ ಆರೋಪಿ. ಯಮನೂರು ಗ್ರಾಮದಲ್ಲಿ ಇರುವ ಅವರ ತಂದೆ ರಾಜು ಮನೆಯಲ್ಲಿ ಕಳವು ಮಾಡಿದ್ದ ಶೋಭಾಳಿಂದ 21 ಲಕ್ಷ ರೂ. ಮೌಲ್ಯದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಕಗ್ಗದಾಸನಪುರದಲ್ಲಿ ಹೊಸ ಮನೆ ಖರೀದಿಸಿದ್ದ ಶೋಭಾ ಇದಕ್ಕಾಗಿ ಸಾಲ ಮಾಡಿಕೊಂಡಿದ್ದಳು. ಸಾಲ ತೀರಿಸಲು ಹಣ ಕೊಡುವಂತೆ ತವರು ಮನೆಯವರಿಗೆ ಕೇಳಿದ್ದಳು. ಆದರೆ ತವರು ಮನೆಯವರು ಹಣ ನೀಡಿರಲಿಲ್ಲ.
ಮಾರ್ಚ್ 20ರಂದು ರಾಜು ಕುಟುಂಬ ಸಮೇತರಾಗಿ ಕಾಶಿ ಯಾತ್ರೆಗೆ ಹೋಗಿದ್ದಾಗ ಶೋಭಾ ನಕಲಿ ಕೀ ಬಳಸಿ ಚಿನ್ನಾಭರಣ ಕಳವು ಮಾಡಿದ್ದಳು. ಕದ್ದ ಚಿನ್ನದ ಪೈಕಿ 30 ಗ್ರಾಂ ಚಿನ್ನಾಭರಣಗಳನ್ನು ಒತ್ತೆ ಇಟ್ಟಿದ್ದು, ಉಳಿದವುಗಳನ್ನು ಮನೆಯಲ್ಲಿ ಬಚ್ಚಿಟ್ಟಿದ್ದಳು. ಮಾರ್ಚ್ 23 ರಂದು ಕಾಶಿಯಿಂದ ವಾಪಸ್ ಬಂದ ರಾಜು ಕುಟುಂಬದವರು ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಮಾರತಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಇನ್ ಸ್ಪೆಕ್ಟರ್ ಅನಿಲ್ ಕುಮಾರ್ ಅವರ ತಂಡ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಸುಳಿವು ಆಧರಿಸಿ ಶೋಭಾಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ.