ಶ್ರೀನಗರ: ಜಮ್ಮು-ಕಾಶ್ಮೀರ ಪಹಲ್ಗಾಮ್ ಪ್ರದೇಶದ ಬೈಸರನ್ ವ್ಯಾಲಿಯಲ್ಲಿ ಉಗ್ರರ ಅಟ್ಟಹಾಸಕ್ಕೆ ಶಿವಮೊಗ್ಗ ಮೂಲದ ಪ್ರವಾಸಿಗ ಸೇರಿ ಇಬ್ಬರು ಬಲಿಯಾಗಿದ್ದಾರೆ. 12 ಜನರು ಗಾಯಗೊಂಡಿದ್ದಾರೆ. ಪತ್ನಿ ಹಾಗೂ ಮಗನ ಕಣ್ಮುಂದೆಯೇ ಪತಿಯನ್ನು ಗುಂಡಿಟ್ಟು ಭಯೋತ್ಪಾದಕರು ಹತ್ಯೆ ಮಾಡಿದ್ದಾರೆ.
ಶಿವಮೊಗ್ಗ ನಗರದ ನಿವಾಸಿ ಮಂಜುನಾಥ್ ರಾವ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಇನ್ನೋರ್ವರ ಗುರುತು ಪತ್ತೆಯಾಗಿಲ್ಲ. 12 ಜನರು ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಪತಿ ಮಂಜುನಾಥ್ ಅವರನ್ನು ಕಳೆದುಕೊಂಡ ಪತ್ನಿ ಪಲ್ಲವಿ ಉಗ್ರರ ಅಟ್ಟಹಾಸದ ಬಗ್ಗೆ ಮಾಹಿತಿ ನೀಡಿದ್ದಾರೆ.
ನನ್ನ ಹಾಗೂ ಮಗನ ಕಣ್ಮುಂದೆಯೇ ನನ್ನ ಪತಿ ಪ್ರಾಣ ಬಿಟ್ಟಿದ್ದಾರೆ. ಮಗನಿಗೆ ತಿಂಡಿ ತರಲೆಂದು ಅಂಗಡಿಯಲ್ಲಿ ವಿಚಾರಿಸುತ್ತಿದ್ದರು. ಈ ವೇಳೆ ಗುಂಡಿನ ಶಬ್ದ ಕೇಳಿ ನಾನು ತಿರುಗಿ ನೋಡುತ್ತಿದ್ದೆ. ಅಷ್ಟರಲ್ಲಿ ನನ್ನ ಪತಿ ಕೆಳಗೆ ಬಿದ್ದಿದ್ದಾರೆ. ನನ್ನ ಪತಿಯ ತಲೆಗೆ ಉಗ್ರರು ಗುಂಡೇಟು ಹಾರಿಸಿದ್ದಾರೆ. ನನ್ನ ಹಾಗೂ ಮಗನ ಕಣ್ಮುಂದೆಯೇ ಪತಿ ಸಾವನ್ನಪ್ಪಿದ್ದಾರೆ ಎಂದು ಮೃತ ಮಂಜುನಾಥ್ ಪತ್ನಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ನನ್ನ ಪತಿಯನ್ನು ಕೊಂದಿದ್ದೀಯಾ ನನ್ನ ನನ್ನ ಮಗನನ್ನು ಕೊಂದು ಬಿಡು ಎಂದು ಉಗ್ರನ ಬಳಿ ಕೇಳಿಕೊಂಡರೂ ನಮ್ಮನ್ನು ಕೊಂದಿಲ್ಲ. ನಿನ್ನನ್ನು ಕೊಲ್ಲಲ್ಲ ಹೋಗಿ ಮೋದಿಗೆ ಹೇಳು ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಜಮ್ಮು-ಕಾಶ್ಮೀರ ಪ್ರವಾಸಕ್ಕೆಂದು ಬಂದು ನನ್ನ ಪತಿಯನ್ನೇ ಕಳೆದುಕೊಂಡಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ.