ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದ ಅವಲಂಬಿತ ಸದಸ್ಯರು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ಮೂಲಕ ನಗದು ರಹಿತ ಆರೋಗ್ಯ ಸಂಜೀವಿನಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಸಂಬಂಧ ರಾಜ್ಯ ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಸರ್ಕಾರಿ ನೌಕರರಿಗೆ ಈ ಯೋಜನೆ ಐಚ್ಛಿಕವಾಗಿದ್ದು, ಯೋಜನೆಯಡಿ ನೌಕರರು ವೈದ್ಯಕೀಯ ಸೌಲಭ್ಯ ಪಡೆಯಲು ಅಥವಾ ಹೊರಗುಳಿಯಲು ಅವಕಾಶ ಕಲ್ಪಿಸಲಾಗಿದೆ.
ಒಂದು ವೇಳೆ ಯೋಜನೆಗೆ ಸೇರಲು ಬಯಸುವವರು ಮೇ 20ರೊಳಗೆ ತಮ್ಮ ಮೇಲಾಧಿಕಾರಿಗಳ ಮೂಲಕ ಡಿಡಿಓ ಗಳಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ. ಯೋಜನೆ ವ್ಯಾಪ್ತಿಗೆ ಬರುವ ನೌಕರರ ವೇತನವನ್ನು ಮೇ ತಿಂಗಳಿನಿಂದ ಕಡಿತ ಮಾಡಲಾಗುವುದು. ಗ್ರೂಪಿ ಎ ಸಿಬ್ಬಂದಿಗೆ ಒಂದು ಸಾವಿರ ರೂ., ಗ್ರೂಪ್ ಬಿ ಸಿಬ್ಬಂದಿಗೆ 500 ರೂಪಾಯಿ, ಗ್ರೂಪ್ ಸಿ ಸಿಬ್ಬಂದಿಗೆ 350 ರೂಪಾಯಿ, ಗ್ರೂಪ್ ಡಿ ಸಿಬ್ಬಂದಿಗೆ 250 ರೂಪಾಯಿಗಳನ್ನು ಮಾಸಿಕವಾಗಿ ಕಡಿತ ಮಾಡಲಾಗುವುದು ಎಂದು ಹೇಳಲಾಗಿದೆ.