ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ರಾಜ್ಯ ಸರ್ಕಾರ ಸರಬರಾಜು ಮಾಡುವ ಪಠ್ಯಪುಸ್ತಕದ ಬೆಲೆ ಕೂಡ ಶೇಕಡ 10ರಷ್ಟು ಹೆಚ್ಚಳವಾಗಿದೆ.
ಇದರಿಂದ ವಿದ್ಯಾರ್ಥಿಗಳ ಪ್ರವೇಶ ಶುಲ್ಕದ ಮೇಲೆಯೂ ಪರಿಣಾಮ ಬೀರಲಿದ್ದು, ಪೋಷಕರಿಗೆ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಕರ್ನಾಟಕ ಪಠ್ಯಪುಸ್ತಕ ಸಂಘವು ಶಾಲೆಗಳ ಬೇಡಿಕೆಗೆ ಅನುಗುಣವಾಗಿ ರಾಜ್ಯ ಪಠ್ಯಕ್ರಮದ ಪಠ್ಯಪುಸ್ತಕಗಳನ್ನು ಮುದ್ರಿಸಿ ಶಾಲೆಗಳಿಗೆ ವಿತರಿಸುತ್ತದೆ. ಸರ್ಕಾರಿ ಶಾಲೆಗಳಿಗೆ ಉಚಿತವಾಗಿ, ಖಾಸಗಿ ಶಾಲೆಗಳಿಗೆ ನಿಗದಿತ ದರ ಪಡೆದು ಪುಸ್ತಕಗಳನ್ನು ನೀಡಲಾಗುವುದು.
ಕಳೆದ ವರ್ಷ 34 ರೂಪಾಯಿ ಇದ್ದ ಪುಸ್ತಕದ ದರ ಈ ವರ್ಷ 36 ರೂಪಾಯಿಗೆ ಏರಿಕೆಯಾಗಿದೆ. ಕೆಲವು ಪುಸ್ತಕಗಳ ದರ ಶೇಕಡ 100ರಷ್ಟು ಏರಿಕೆಯಾಗಿದೆ. ಆಂಗ್ಲ ಭಾಷೆಯ ಪುಸ್ತಕ ಕಳೆದ ವರ್ಷ 25 ರೂಪಾಯಿ ಇದ್ದು, ಈ ವರ್ಷ 51 ರೂಪಾಯಿಗೆ ಏರಿಕೆಯಾಗಿದೆ.
ಒಂದೊಂದು ಪುಸ್ತಕ ಶೀರ್ಷಿಕೆ ಒಂದೊಂದು ದರದಲ್ಲಿ ಏರಿಕೆಯಾಗಿದೆ. 14 ಶೀರ್ಷಿಕೆಗಳು 1ರಿಂದ 17 ರೂಪಾಯಿ, 86 ಶೀರ್ಷಿಕೆಗಳು 1 ರಿಂದ 27 ರೂ. ವರೆಗೆ ಹೆಚ್ಚಳ ಮಾಡಲಾಗಿದೆ. ಪಠ್ಯ ಪುಸ್ತಕಗಳ ಒಟ್ಟಾರೆ ಏರಿಕೆಯ ಪ್ರಮಾಣ ನೋಡಿದಾಗ ಶೇಕಡ 10ರಷ್ಟು ಹೆಚ್ಚಳ ಆಗಿದೆ.