ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
ಅಮೃತಾಪುರದ ಸಂಜು ನಾಯ್ಕ್(26) ಕೊಲೆಯಾದ ಯುವಕ. ಅದೇ ಗ್ರಾಮದ ರುದ್ರೇಶ್ ನಾಯ್ಕ ಕೊಲೆ ಆರೋಪಿಯಾಗಿದ್ದಾನೆ. ಘಟನೆಯ ಸಂದರ್ಭದಲ್ಲಿ ಜಗಳ ಬಿಡಿಸಲು ಬಂದ ಅವಿನಾಶ್ ಎಂಬಾತನಿಗೆ ರುದ್ರೇಶ್ ನಾಯ್ಕ ಕಚ್ಚಿ ಗಾಯಗೊಳಿಸಿದ್ದಾನೆ.
ಅಮೃತಾಪುರ ಗ್ರಾಮದ ಕಟ್ಟಡವೊಂದರಲ್ಲಿ ಚೀಟಿ ಹಣದ ವಿಚಾರವಾಗಿ ಸಭೆ ನಡೆಸಿದ್ದು, ಸಂಜು ನಾಯ್ಕ್ ಚೀಟಿ ಹಣ ಸರಿಯಾಗಿ ಕಟ್ಟದೆ ಗಲಾಟೆ ಮಾಡುತ್ತಿದ್ದ. ಈ ವೇಳೆ ರುದ್ರೇಶ್ ನಾಯ್ಕನೊಂದಿಗೆ ಜಗಳವಾಗಿದೆ. ದೊಣ್ಣೆಯಿಂದ ಹೊಡೆದು ರುದ್ರೇಶ್ ನಾಯ್ಕ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಸಂಜು ನಾಯ್ಕ್ ಮೃತಪಟ್ಟಿದ್ದಾನೆ. ಹಲ್ಲೆ ತಡೆಯಲು ಹೋದ ಅವಿನಾಶ್ ಗೆ ರುದ್ರೇಶ್ ನಾಯ್ಕ ಕಚ್ಚಿ ಗಾಯಗೊಳಿಸಿದ್ದಾನೆ. ತರೀಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.