ಬೆಂಗಳೂರು: ರಾಜ್ಯವೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ (68) ಅವರ ಬರ್ಬರ ಹತ್ಯೆಯಾಗಿದೆ. ಬೆಂಗಳೂರಿನ ತಮ್ಮದೇ ನಿವಾಸದಲ್ಲಿ ನಿವೃತ್ತ ಡಿಜಿ-ಐಜಿಪಿ, ಪತ್ನಿಯಿಂದಲೇ ಕೊಲೆಯಾಗಿ ಹೋಗಿದ್ದಾರೆ.
ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ ನಿವಾಸದಲ್ಲಿ ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡು ಪಲ್ಲವಿ ಪತಿಯನ್ನೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಓಂ ಪ್ರಕಾಶ್ ಅವರನ್ನು ಹತ್ಯೆ ಮಾಡಿದ ಬಳಿಕ ಪತ್ನಿ ಪಲ್ಲವಿಯೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಮತ್ತೋರ್ವ ನಿವೃತ್ತ ಡಿಜಿ-ಐಜಿಪಿ ಅವರ ಪತ್ನಿಗೂ ವಿಡಿಯೋ ಕಾಲ್ ಮಾಡಿ ತಿಳಿಸಿದ್ದಾರೆ ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಪತಿ-ಪತ್ನಿ ನಡಿವೆ ಹಲವು ದಿನಗಳಿಂದ ಮನಃಸ್ತಾಪವುಂಟಾಗಿತ್ತು. ಓಂ ಪ್ರಕಾಶ್ ತಮ್ಮ ಆಸ್ತಿಯನ್ನು ಸಹೋದರಿ ಹೆಸರಿಗೆ ಮಾಡಿದ್ದರು. ಇದೇ ಕಾರಣಕ್ಕೆ ಪತ್ನಿ ಪಲ್ಲವಿ ಹಾಗೂ ಓಂ ಪ್ರಕಾಶ್ ಅವರಿಗೆ ಆಗಾಗ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ. ಹೆಚ್.ಎಸ್.ಆರ್ ಲೇಔಟ್ ನ ಮೂರು ಅಂತಸ್ತಿನ ಮನೆಯಲ್ಲಿ ಓಂ ಪ್ರಕಾಶ್ ಕುಟುಂಬ ವಾಸವಾಗಿತ್ತು. ಕೆಳಮಹಡಿಯಲ್ಲಿ ಪತ್ನಿ ಪಲ್ಲವಿಯೇ ಪತಿಯನ್ನು ಕೊಲೆ ಮಾಡಿದ್ದಾರೆ. ಹತ್ಯೆ ವೇಳೆ ಮನೆಯಲ್ಲಿ ಆರು ಜನರಿದ್ದರು, ಸೊಸೆ ಕೂಡ ಇದ್ದರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಓಂ ಪ್ರಕಾಶ್ ಅವರ ಪತ್ನಿ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಮೃತ ಓಂ ಪ್ರಕಾಶ್ ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ತನಿಖೆ ಬಳಿಕವಷ್ಟೇ ನಿವೃತ್ತ ಡಿಜಿ-ಐಜಿಪಿ ಹತ್ಯೆಯ ಹಿಂದಿನ ನಿಖರ ಕಾರಣ ತಿಳಿದುಬರಬೇಕಿದೆ.