ಬೆಂಗಳೂರಿನಲ್ಲಿ ನಡೆದ ಒಂದು ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಆಟೋ ಚಾಲಕರೊಬ್ಬರಿಗೆ ಹಿಂದಿಯಲ್ಲಿ ಮಾತನಾಡಲು ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ. ಆದರೆ, ಆಟೋ ಚಾಲಕ ಇದಕ್ಕೆ ಸೊಪ್ಪು ಹಾಕದೆ ದಿಟ್ಟ ಉತ್ತರ ನೀಡಿದ್ದಾರೆ. ಈ ಮಾತಿನ ಚಕಮಕಿ ಇದೀಗ ನಗರದಲ್ಲಿ ಭಾಷೆಯ ಕುರಿತು ಹೊಸ ಚರ್ಚೆಗೆ ನಾಂದಿ ಹಾಡಿದೆ.
ವಿಡಿಯೋದಲ್ಲಿರುವ ವ್ಯಕ್ತಿ, “ನೀವು ಬೆಂಗಳೂರಿನಲ್ಲಿ ಇರಬೇಕಾದರೆ ಹಿಂದಿಯಲ್ಲಿ ಮಾತನಾಡಿ” ಎಂದು ಹೇಳುತ್ತಾನೆ. ಆತನ ಕೆಲವು ಸ್ನೇಹಿತರು ಅವನನ್ನು ಸಮಾಧಾನಪಡಿಸಲು ಮತ್ತು ಅಲ್ಲಿಂದ ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿರುವುದು ಸಹ ವಿಡಿಯೋದಲ್ಲಿ ಕಾಣಿಸುತ್ತದೆ.
ಆದರೆ, ಆಟೋ ಚಾಲಕ ತಕ್ಷಣವೇ ತಿರುಗೇಟು ನೀಡುತ್ತಾ, “ನೀವು ಬೆಂಗಳೂರಿಗೆ ಬಂದಿದ್ದೀರಿ, ನೀವು ಕನ್ನಡದಲ್ಲಿ ಮಾತನಾಡಿ. ನಾನು ಹಿಂದಿಯಲ್ಲಿ ಮಾತನಾಡುವುದಿಲ್ಲ” ಎಂದು ಖಡಕ್ ಆಗಿ ಹೇಳುತ್ತಾರೆ.
ಈ ವಾದಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಈ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡಿದ ತಕ್ಷಣವೇ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ.
ನೆಟ್ಟಿಗರ ಆಕ್ರೋಶ
ಈ ವಿಡಿಯೋ X (ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿತ್ತು) ನಲ್ಲಿ ಅಪ್‌ಲೋಡ್ ಆದ ತಕ್ಷಣವೇ, ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ತಮ್ಮ ಮಾತೃಭಾಷೆಯನ್ನು ಬಿಟ್ಟು ಬೇರೆಯವರ ಭಾಷೆಯಲ್ಲಿ ಮಾತನಾಡಬೇಕು ಎಂದು ನಿರೀಕ್ಷಿಸುವ ವ್ಯಕ್ತಿಯ ವರ್ತನೆಗೆ ಕೋಪಗೊಂಡಿದ್ದಾರೆ.
ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. pic.twitter.com/sKBlGmbdX0
— ವಿನಯ್. ಎಸ್. ರೆಡ್ಡಿ (@Vinayreddy71) April 18, 2025