ಬೆಂಗಳೂರು: ಬೇಗೂರು ನಾಗಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ನಾಗಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವೆಡೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಬ್ರಹ್ಮರಥೋತ್ಸವದಲ್ಲಿ 15,000-20,000 ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಬೆಳಿಗ್ಗೆ 11.55ಕ್ಕೆ ರಥೋತ್ಸವ ಆರಂಭವಾಗಲಿದೆ. ರಾತ್ರಿ ಮೆರವಣಿಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೇಗೂರು ಪಿಕೆ ಕಲ್ಯಾಣ ಮಂಟಪ ಜಂಕ್ಷನ್ ನಿಂದ ಏಕಾನ ಆಸ್ಪತ್ರೆ ಜಂಕ್ಷನ್ ವರೆಗೆ, ಮಣಿಪಾಲ್ ಕೌಂಟಿ ರಸ್ತೆಯ ಫಾಲ್ಕನ್ ಮಾರ್ಕೆಟ್ ಜಂಕ್ಷನ್ ನಿಂದ ದೇವಸ್ಥಾನದವರೆಗೆ ಹಾಗೂ ಡಿಎಲ್ ಎಫ್ ಜಂಕ್ಷನ್ ನಿಂದ ಬೇಗೂರು ಲೇಕ್ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ.
ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗ ಅನುಸರಿಸಲು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಪರ್ಯಾಯವಾಗಿ ಬೊಮ್ಮನಹಳ್ಳಿ-ಹೊಂಗಸಂದ್ರದಿಂದ ಬೇಗೂರು ಕೊಪ್ಪ ರಸ್ತೆಗೆ ಬರುವ ವಾಹನಗಳು ಪಿ.ಕೆ.ಕಲ್ಯಾಣ ಮಂಟಪ ಜಂಕ್ಷನ್ ನಲ್ಲಿ ಬಲಕ್ಕೆ ತಿರುಗಿ ದೇವರ ಚಿಕ್ಕನಹಳ್ಳಿ ರಸ್ತೆ ಮೂಲಕ ಮುಂದೆ ಹೋಗಿ ಎಡಕ್ಕೆ ತಿರುಗಿ ಡಿಇಒ ಹೈಟ್ಸ್ ಮೂಲಕ ಡಿಎಲ್ ಎಫ್ ಜಂಕ್ಷನ್ ಗೆ ಹೋಗಿ ನಂತರ ಬೇಗೂರು ಕೊಪ್ಪ ರಸ್ತೆಗೆ ಹೋಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಹೊಸೂರು ಮುಖ್ಯರಸ್ತೆಗೆ ಮತ್ತು ಮಣಿಪಾಲ ಕೌಂಟಿ ರಸ್ತೆಯಿಂದ ಬರುವವರು ಫಾಲ್ಕನ್ ಮಾರುಕಟ್ಟೆ ಬಳಿ ಎಡಕ್ಕೆ ತಿರುಗಿ ಎಇಸಿಎಸ್ ಸಿ ಬ್ಲಾಕ್ ಮೂಲಕ ಬೇಗೂರು ಕೊಪ್ಪ ರಸ್ತೆ ಹಾಗೂ ಬನ್ನೇರುಘಟ್ಟ ಮುಖ್ಯರಸ್ತೆಗೆ ಹೋಗಬಹುದು ಎಂದು ತಿಳಿಸಿದ್ದಾರೆ.