ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಲಾರಿ ಮಾಲೀಕರ ಸಂಘ ನಡೆಸಿದ ಸಭೆ ವಿಫಲವಾಗಿದ್ದು, ರಾಜ್ಯಾದ್ಯಂತ ಅನಿರ್ಧಿಷ್ಠಾವಧಿ ಕಾಲ ಲಾರಿ ಮುಷ್ಕರ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಲಾರಿ ಮಾಲೀಕರ ಸಂಘದ ಪ್ರತಿನಿಧಿಗಳೊಂದಿ ಮೊದಲ ಸುತ್ತಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ನಿವಾಸದಲ್ಲಿ ಲಾರಿ ಮಾಲೀಕರ ಸಂಘದ ಮುಖಂಡರೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ್ದರು. ಈ ವೇಳೆ ಲಾರಿ ಚಾಲಕರ ಹಾಗೂ ಮಾಲೀಕರ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಅರಿವಿದೆ. ತಮ್ಮ ಮನವಿ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು. ಮುಷ್ಕರ ಕೈಬಿಡುವಂತೆ ಸಿಎಂ ಸೂಚಿಸಿದ್ದಾರೆ. ಆದರೆ ಲಾರಿ ಮಾಲೀಕರ ಸಂಘ ಮುಷ್ಕರ ಹಿಂಪಡೆಯಲು ಒಪ್ಪಿಲ್ಲ ಎಂದು ತಿಳಿದುಬಂದಿದೆ.
ಸಿಎಂ ಸಿದ್ದರಾಮಯ್ಯ ಜೊತೆ ಸುದೀರ್ಘ ಒಂದೂವರೆ ಗಂಟೆಗಳ ಕಾಲ ನಡೆದ ಸುದೀರ್ಘ ಸಭೆ ವಿಫಲವಾಗಿದೆ. ಲಾರಿ ಮಾಲೀಕರು ರಾಜ್ಯಾದ್ಯಂತ ಮುಷ್ಕರ ಮುಂದುವರೆಸಲು ತೀರ್ಮಾನಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ, ಯಾವುದೇ ಕಾರಣಕ್ಕೂ ಲಾರಿ ಮುಷ್ಕರ ನಿಲ್ಲುವುದಿಲ್ಲ. ನಾವು ತೀರ್ಮಾನ ಮಾಡಿಯಾಗಿದೆ. ಮುಖ್ಯಮಂತ್ರಿಗಳು ಮುಷ್ಕರ ನಿಲ್ಲಿಸುವಂತೆ ಹೇಳಿದರು. ಆದರೆ ನಮ್ಮ ಬೇಡಿಕೆ ಈಡೇರಿಕೆವರೆಗೂ ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.