ಉತ್ತರ ಪ್ರದೇಶದ ಲಖಿಂಪುರದಲ್ಲಿ ಸೋಮವಾರ (ಏಪ್ರಿಲ್ 15) ಬೆಳಿಗ್ಗೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಭೀಕರ ಹಲ್ಲೆಯ ಘಟನೆ ಬೆಳಕಿಗೆ ಬಂದಿದೆ. ಎಲ್‌ಆರ್‌ಪಿ ಹೊರಠಾಣೆ ಬಳಿಯ ತಂಪು ಪಾನೀಯಗಳ ಅಂಗಡಿಯೊಂದಕ್ಕೆ ನುಗ್ಗಿದ ಗುಂಪೊಂದು ಅಂಗಡಿ ಮಾಲೀಕನಿಗೆ ದೊಣ್ಣೆಗಳಿಂದ ಮನಬಂದಂತೆ ಹೊಡೆದಿದೆ. ಅಂಗಡಿಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ಸಂಪೂರ್ಣ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ʼದೈನಿಕ್ ಭಾಸ್ಕರ್ʼ ವರದಿಯ ಪ್ರಕಾರ, ಚೌಚ್ ಗ್ರಾಮದ ನಿವಾಸಿ ಜಗದೀಶ್ ಕುಮಾರ್, ಬೆಳಿಗ್ಗೆ 7:53 ರ ಸುಮಾರಿಗೆ ತಮ್ಮ ಅಂಗಡಿ ತೆರೆದಾಗ ಹಲ್ಲೆಕೋರರು ಒಳನುಗ್ಗಿದ್ದಾರೆ. ಅವರು ಹಲ್ಲೆ ಮಾಡಿದವರನ್ನು ರಾಜೇಶ್ ವರ್ಮಾ, ಅವರ ಮಗ ರೋಹಿತ್ (ಇಬ್ಬರೂ ಚಡಾಮೌ ಪೂರ್ವದವರು) ಮತ್ತು ಚೌಚ್‌ನ ಅನುಜ್ ವರ್ಮಾ ಎಂದು ಗುರುತಿಸಿದ್ದಾರೆ. ದೊಣ್ಣೆಗಳಿಂದ ಸಜ್ಜಿತರಾಗಿದ್ದ ಅವರು ಏಕಾಏಕಿ ಜಗದೀಶ್‌ಗೆ ಹೊಡೆಯಲು ಪ್ರಾರಂಭಿಸಿದರು.
“ನಾನು ಅಂಗಡಿ ತೆರೆದ ತಕ್ಷಣ ಅವರು ಬಂದು ದೊಣ್ಣೆಗಳಿಂದ ಹೊಡೆಯಲು ಪ್ರಾರಂಭಿಸಿದರು” ಎಂದು ಜಗದೀಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಗಲಾಟೆ ಕೇಳಿ ಸ್ಥಳೀಯರು ಧಾವಿಸಿ ಬಂದಾಗ ಹಲ್ಲೆಕೋರರು ಪರಾರಿಯಾಗಿದ್ದಾರೆ. ಪರಾರಿಯಾಗುವ ಮೊದಲು ಅವರು ಜಗದೀಶ್‌ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.
ಹಲ್ಲೆಯು ಆರೋಪಿಗಳೊಂದಿಗೆ ದೀರ್ಘಕಾಲದ ಭೂ ವಿವಾದದ ಕಾರಣದಿಂದ ನಡೆದಿದೆ ಎಂದು ಜಗದೀಶ್ ಪೊಲೀಸರಿಗೆ ತಿಳಿಸಿದ್ದಾರೆ. ಹಲ್ಲೆಯ ನಂತರ ಅನುಜ್ ಗ್ರಾಮದೊಳಗೆ ನಿಂತು ತನ್ನ ಕುಟುಂಬಕ್ಕೆ ನಿಂದನೆ ಮತ್ತು ಬೆದರಿಕೆಗಳನ್ನು ಹಾಕುವುದನ್ನು ಮುಂದುವರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.
ವೈರಲ್ ಆದ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ, ಹಲ್ಲೆಕೋರರು ಸ್ಪಷ್ಟವಾಗಿ ಅಂಗಡಿಯೊಳಗೆ ಪ್ರವೇಶಿಸಿ ಹಿಂಸಾತ್ಮಕ ಹಲ್ಲೆ ನಡೆಸುತ್ತಿರುವುದು ಕಂಡುಬರುತ್ತದೆ, ಇದು ಸಂತ್ರಸ್ತನ ಹೇಳಿಕೆಯನ್ನು ಬೆಂಬಲಿಸುತ್ತದೆ.
ಘಟನೆಯ ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತನ ದೂರಿನ ಆಧಾರದ ಮೇಲೆ ನಾಲ್ವರು ಹೆಸರಿಸಲಾದ ವ್ಯಕ್ತಿಗಳು ಮತ್ತು ಗುರುತಿಸಲಾಗದ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. “ಗಾಯಗೊಂಡ ವ್ಯಾಪಾರಿಯನ್ನು ವೈದ್ಯಕೀಯ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ” ಎಂದು ಅಧಿಕಾರಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ.
ये हमला तो नहीं हो सकता, शायद कोई फिल्म शूट हो रही होगी !!
— Sachin Gupta (@SachinGuptaUP) April 15, 2025
सीन है : होटल मालिक जगदीश कुमार की राजेश वर्मा, अनुज वर्मा, रोहित ने डंडों से कुटाई की।
📍लखीमपुर खीरी, उत्तर प्रदेश pic.twitter.com/4JrKRpu69b