ಚೀನಾದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದ ಭೀಕರ ಟ್ರಕ್ ಅಪಘಾತವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ನಿಂಗ್ಬೋ ನಗರದ ಶೆಂಗ್ಲು ಎತ್ತರದ ಎಕ್ಸ್‌ಪ್ರೆಸ್‌ವೇಯಿಂದ ಟ್ರಕ್ ಒಂದು ನಿಯಂತ್ರಣ ತಪ್ಪಿ ಕೆಳಗೆ ಉರುಳಿದರೂ, 25 ವರ್ಷದ ಚಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ವರದಿಗಳ ಪ್ರಕಾರ, ಟ್ರಕ್ ಎತ್ತರದ ರಸ್ತೆಯಲ್ಲಿ ದಕ್ಷಿಣ ದಿಕ್ಕಿಗೆ ವೇಗವಾಗಿ ಚಲಿಸುತ್ತಿತ್ತು. ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಟ್ರಕ್ ರಸ್ತೆಯ ಬದಿಯಲ್ಲಿದ್ದ ನಿರ್ಮಾಣದ ತಡೆಗೋಡೆಗಳನ್ನು ಮುರಿದು ನೇರವಾಗಿ ಕೆಳಗೆ ಬಿದ್ದಿದೆ. ಅತಿ ಎತ್ತರದಿಂದ ಟ್ರಕ್ ನೆಲಕ್ಕೆ ಅಪ್ಪಳಿಸಿದ ರಭಸಕ್ಕೆ ಅದು ಸಂಪೂರ್ಣವಾಗಿ ಪುಡಿಪುಡಿಯಾಗಿದೆ. ಟ್ರಕ್‌ನ ಬಿಡಿಭಾಗಗಳು ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಸಂಚಾರ ಪೊಲೀಸರು ಮತ್ತು ತುರ್ತು ವೈದ್ಯಕೀಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಹೈಡ್ರಾಲಿಕ್ ಉಪಕರಣಗಳನ್ನು ಬಳಸಿ ಟ್ರಕ್‌ನ ಕ್ಯಾಬಿನ್‌ನಲ್ಲಿ ಸಿಲುಕಿದ್ದ ಚಾಲಕನನ್ನು ಸುಮಾರು ಅರ್ಧ ಗಂಟೆಯ ಕಾರ್ಯಾಚರಣೆಯ ನಂತರ ಸುರಕ್ಷಿತವಾಗಿ ಹೊರತೆಗೆಯಲಾಯಿತು. ನಂತರ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಅದೃಷ್ಟವಶಾತ್, ಚಾಲಕನಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಸಿಕ್ಸಿ ಸಾರ್ವಜನಿಕ ಭದ್ರತಾ ಬ್ಯೂರೋ ಈ ಘಟನೆಗೆ ಚಾಲಕನ ಅಸಮರ್ಪಕ ನಿರ್ವಹಣೆಯೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದೆ. ಅಪಘಾತದ ವೇಳೆ ಚಾಲಕ ಮದ್ಯಪಾನ ಮಾಡಿರಲಿಲ್ಲ ಎಂದು ಖಚಿತಪಡಿಸಲಾಗಿದ್ದು, ಇತರ ಕಾರಣಗಳ ಬಗ್ಗೆ ತನಿಖೆ ಮುಂದುವರೆದಿದೆ. ಈ ಘಟನೆಯಲ್ಲಿ ಬೇರೆ ಯಾರಿಗೂ ಯಾವುದೇ ಹಾನಿಯಾಗಿಲ್ಲ.
Truck veers off course and plunges off expressway bridge. pic.twitter.com/9G8PArq95n
— Daily Mail Online (@MailOnline) April 13, 2025