ಹುಬ್ಬಳ್ಳಿ: ಹುಬ್ಬಳ್ಳಿಯ ಮೃತ ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಸಿಎಂ ನಿರ್ದೇಶನದ ಮೇರೆಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮ್ಮದ್ ತಿಳಿಸಿದ್ದಾರೆ.
ಶಾಸಕ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಅವರೊಂದಿಗೆ ಕೆಎಂಸಿ ಆಸ್ಪತ್ರೆಗೆ ಭಾನುವಾರ ಸಂಜೆ ಭೇಟಿ ನೀಡಿ ಮೃತ ಬಾಲಕಿಯ ಕುಟುಂಬದವರಿಗೆ ಸಲೀಂ ಅಹಮದ್ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಲಕಿಯ ಕುಟುಂಬದವರಿಗೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸಾದ್ ಅಬ್ಬಯ್ಯ ಮಾತನಾಡಿ, ಸ್ಲಂ ಬೋರ್ಡ್ ನಿಂದ ಬಾಲಕಿಯ ಕುಟುಂಬದವರಿಗೆ ಒಂದು ಮನೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಮನೆ ಅಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಬಿಹಾರ ಮೂಲದ ಕಾರ್ಮಿಕ ರಿತೇಶ್ ಕುಮಾರ್ ಕೊಲೆ ಮಾಡಿದ್ದ. ಬಂಧನದ ವೇಳೆ ಆರೋಪಿ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.