ಛತ್ತೀಸ್‌ಗಢದ ಸುಕ್ಮಾ ಅರಣ್ಯದಲ್ಲಿ ನಡೆದ ಅಮಾನವೀಯ ಘಟನೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದೆ. ಅಲ್ಯೂಮಿನಿಯಂ ತಂತಿಯ ಬೇಲಿಗೆ ಸಿಲುಕಿದ್ದ ಕರಡಿಯೊಂದನ್ನು ಗ್ರಾಮಸ್ಥರು ಮನಬಂದಂತೆ ಹಿಂಸಿಸುತ್ತಿರುವ ದೃಶ್ಯಗಳು ಇದರಲ್ಲಿವೆ. ಕರಡಿ ನೋವಿನಿಂದ ಚೀರುತ್ತಿದ್ದರೂ, ಸುತ್ತಲಿನ ಮಂದಿ ಅದನ್ನು ಅನುಕರಿಸುತ್ತಾ, ಕಿವಿಗಳನ್ನು ಎಳೆಯುತ್ತಾ ಕ್ರೂರವಾಗಿ ವರ್ತಿಸಿದ್ದಾರೆ. ಕರಡಿಯ ಮೂಗಿನಿಂದ ರಕ್ತ ಸುರಿಯುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಆರು ತಿಂಗಳ ಹಿಂದಿನ ಈ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಅರಣ್ಯ ಇಲಾಖೆ ತಕ್ಷಣ ಕಾರ್ಯಪ್ರವೃತ್ತವಾಗಿದೆ. ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಇಲಾಖೆ, ಆರೋಪಿಗಳನ್ನು ಗುರುತಿಸಿ ಬಂಧಿಸಲು ಮಾಹಿತಿ ನೀಡಿದವರಿಗೆ 10,000 ರೂಪಾಯಿ ಬಹುಮಾನವನ್ನು ಘೋಷಿಸಿದೆ. ಸೈಬರ್ ಸೆಲ್ ಮತ್ತು ವನ್ಯಜೀವಿ ತಜ್ಞರ ಸಹಾಯದಿಂದ ವಿಡಿಯೋವನ್ನು ಪರಿಶೀಲಿಸಲಾಗಿದ್ದು, ಇದು ಸುಕ್ಮಾ ಅರಣ್ಯ ವಿಭಾಗದ ಕೆರ್ಲಾಪಾಲ್ ವಲಯದಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಡಿಗೆ ಬೆನ್ನುಹುರಿಯಲ್ಲಿ ಗಂಭೀರವಾದ ಗಾಯಗಳಾಗಿವೆ ಎಂದು ಶಂಕಿಸಲಾಗಿದೆ.
ಆರೋಪಿಗಳನ್ನು ಬಂಧಿಸಿದ ನಂತರವಷ್ಟೇ ಕರಡಿ ಬದುಕಿದೆಯೋ ಇಲ್ಲವೋ ಎಂಬುದು ಖಚಿತವಾಗಲಿದೆ. ಸದ್ಯಕ್ಕೆ ದುಷ್ಕರ್ಮಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಮನುಷ್ಯನ ಕ್ರೌರ್ಯಕ್ಕೆ ಮುಖವಿಲ್ಲ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.