ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೊಂದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಆಸ್ತಿ ವ್ಯಾಪಾರಿ ಮತ್ತು ಅವರ ವ್ಯವಹಾರ ಪಾಲುದಾರನನ್ನು ಬಂಧಿಸಿದ್ದಾರೆ.
ಆಸ್ತಿ ವ್ಯಾಪಾರಿ ಶಿವೇಂದ್ರ ಯಾದವ್(26) ಮತ್ತು ಅವರ ಸಹಾಯಕ ಗೌರವ್(19) ಆಸ್ತಿ ದಾಖಲೆಗಳನ್ನು ಹಸ್ತಾಂತರಿಸಲು 25 ವರ್ಷದ ಸಂತ್ರಸ್ತೆ ಅಂಜಲಿಗೆ ಕರೆ ಮಾಡಿದ್ದಾರೆ. ನಂತರ, ಅವರು ಆಕೆಗೆ ಮದ್ಯ ಸೇವಿಸುವಂತೆ ಮಾಡಿ, ಉಸಿರುಗಟ್ಟಿಸಿ ಕೊಂದು, ಸುಟ್ಟು ಹಾಕಿ, ಆಕೆಯ ದೇಹವನ್ನು ನದಿಗೆ ಎಸೆದಿದ್ದಾರೆ.
ಐದು ದಿನಗಳ ಕಾಲ ಕಾಣೆಯಾಗಿದ್ದ ಅಂಜಲಿಯ ಶವ ಶನಿವಾರ ನದಿಯ ಬಳಿ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಅಂಜಲಿಯನ್ನು ಕೊಂದಿದ್ದಲ್ಲದೆ, ಶವವನ್ನು ತೋರಿಸಲು ಅವರ ತಂದೆಗೆ ವೀಡಿಯೊ ಕರೆ ಮಾಡಿದ್ದಾನೆ. ಅಂಜಲಿಯ ಕುಟುಂಬ ಸದಸ್ಯರು ಆಕೆಯ ಸುಟ್ಟ ಸ್ಕೂಟರ್ ಅನ್ನು ಚರಂಡಿ ಬಳಿ ಕಂಡುಕೊಂಡ ನಂತರ ಮತ್ತು ಆಸ್ತಿ ವ್ಯಾಪಾರಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ ನಂತರ, ಪೊಲೀಸರು ತನಿಖೆ ಆರಂಭಿಸಿದರು.
ಆರೋಪಿಗಳು ಅಂಜಲಿಯಿಂದ ಭೂಮಿ ಕೊಡಿಸುವುದಾಗಿ 6 ಲಕ್ಷ ರೂ. ಪಡೆದು, ನಂತರ ದಾಖಲೆಗಳನ್ನು ನೀಡುವ ನೆಪದಲ್ಲಿ ಕರೆ ಮಾಡಿದ್ದರು. ನಂತರ ಅವರು ಆಕೆಯನ್ನು ಕೊಂದರು ಎಂದು ಅಂಜಲಿಯ ಸಹೋದರಿ ಕಿರಣ್ ಆರೋಪಿಸಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಶಿವೇಂದ್ರ ಯಾದವ್ ಮತ್ತು ಗೌರವ್ ತಮ್ಮ ಕೃತ್ಯ ಒಪ್ಪಿಕೊಂಡಿದ್ದಾರೆ.