ಶಿವಮೊಗ್ಗ: ಸುಗ್ರೀವಾಜ್ಞೆ ಜಾರಿಯಾದರೂ ಫೈನಾನ್ಸ್ ಸಿಬ್ಬಂದಿ ಕಿರುಕುಳ ನಿಂತಿಲ್ಲ. ಶಿವಮೊಗ್ಗದಲ್ಲಿ ಫೈನಾನ್ಸ್ ಸಿಬ್ಬಂದಿ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕಿರುಕುಳ ತಡೆಯಲಾರದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಅಬ್ದುಲ್ ಸತ್ತಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭದ್ರಾವತಿಯ ದಾಸರಕಲ್ಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಅಬ್ದುಲ್ ಸತ್ತಾರ್ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಸಂಸ್ಥೆಯಿಂದ ಅವರು 5 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಸಾಲ ಪಡೆದಿದ್ದು, ಸಾಲದ ಕಂತುಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದರು. ಕೆಲವು ದಿನಗಳಿಂದ ಸಾಲದ ಮರುಪಾವತಿ ಮಾಡದ ಕಾರಣ ಕಂತು ಪಾವತಿಸುವಂತೆ ಒತ್ತಡ ಹಾಕಲಾಗಿತ್ತು. ಇದರಿಂದ ನೊಂದು ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.