ಛತ್ತೀಸ್ ಗಢದಲ್ಲಿ ನಕ್ಸಲರ ವಿರುದ್ಧದ ಕಾರ್ಯಾಚಾರಣೆ ಮುಂದುವರೆದಿದ್ದು, ಇಂದು ಮೂವರು ನಕ್ಸಲರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ.
ಛತ್ತೀಸ್ ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆಯಿಂದ ನಡೆದ ಭದ್ರತಾ ಪಡೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರನ್ನು ಸದೆಬಡಿಯಲಾಗಿದೆ. ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆ, ನಕ್ಸಲ್ ನಿಗ್ರಹ ದಳ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ವೇಳೆ ನಕ್ಸಲರು ಹಾಗೂ ಭದ್ರತಾ ಪಡೆ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ಮೂವರು ನಕ್ಸಲರನ್ನು ಹತ್ಯೆ ಮಾಡಲಾಗಿದ್ದು, ಘಟನಾ ಸ್ಥಳದಿಂದ ನಕ್ಸಲರ ಮೃತದೇಹ ಹೊರತೆಗೆಯಲಾಗಿದೆ. ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ನಿರ್ದೇಶಕ ಸುಂದರ್ ರಾಜನ್ ಪಿ ತಿಳಿಸಿದ್ದಾರೆ.
ಈ ವರ್ಷ ಛತ್ತೀಸ್ ಗಢದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಈವರೆಗೆ 138 ನಕ್ಸಲರು ಹತ್ಯೆಗೀಡಾಗಿದ್ದಾರೆ. ಈ ಪೈಕಿ ಬಿಜಾಪುರ, ಬಸ್ತಾರ್ ವಿಭಾಗದಲ್ಲಿಯೇ 122 ನಕ್ಸಲರನ್ನು ಸದೆಬಡಿಯಲಾಗಿದೆ.