Shocking: ಸರ್ಕಾರಿ ಕಾಲೇಜಿನಲ್ಲಿ ಪ್ಯೂನ್‌ನಿಂದ ಉತ್ತರ ಪತ್ರಿಕೆಗಳ ಮೌಲ್ಯಮಾಪನ..! ವೈರಲ್‌ ವಿಡಿಯೊಗೆ ತೀವ್ರ ಆಕ್ರೋಶ…..! ತಪ್ಪಿತಸ್ಥರ ವಿರುದ್ಧ ಕ್ರಮ

ಮಧ್ಯಪ್ರದೇಶದ ಸರ್ಕಾರಿ ಕಾಲೇಜೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಶಹೀದ್ ಭಗತ್ ಸಿಂಗ್ ಕಾಲೇಜಿನಲ್ಲಿ ಪ್ಯೂನ್ ಒಬ್ಬರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಕ್ಷಮ್ಯ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ ತಕ್ಷಣವೇ ಕ್ರಮ ಕೈಗೊಂಡಿದೆ.

ವರದಿಗಳ ಪ್ರಕಾರ, ಈ ಘಟನೆ ಈ ವರ್ಷದ ಜನವರಿಯಲ್ಲಿ ನಡೆದಿದೆ ಎನ್ನಲಾಗಿದೆ. ಆದರೆ, ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತ ಕಾಲೇಜು ಆಡಳಿತ ಮಂಡಳಿ ಮತ್ತು ಉನ್ನತ ಶಿಕ್ಷಣ ಇಲಾಖೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ವರ್ಮಾ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನದ ನೋಡಲ್ ಅಧಿಕಾರಿಯಾಗಿದ್ದ ಪ್ರಾಧ್ಯಾಪಕ ರಾಮ್ ಗುಲಾಮ್ ಪಟೇಲ್ ಅವರನ್ನು ಅಮಾನತುಗೊಳಿಸಲಾಗಿದೆ. ಇದರ ಜೊತೆಗೆ, ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನೇಮಕಗೊಂಡಿದ್ದ ಅತಿಥಿ ಉಪನ್ಯಾಸಕಿ ಖುಷ್ಬೂ ಪಗಾರೆ, ಮೌಲ್ಯಮಾಪನ ನಡೆಸುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ (ಪ್ಯೂನ್) ಪನ್ನಾಲಾಲ್ ಪಥಾರಿಯಾ ಮತ್ತು ಈ ಕೃತ್ಯಕ್ಕೆ ಸಹಾಯ ಮಾಡಿದ ಪುಸ್ತಕ ವಿತರಕ ರಾಕೇಶ್ ಕುಮಾರ್ ಮೆಹರ್ ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ಸಚಿವ ವಿಶ್ವಾಸ್ ಸಾರಂಗ್ ಅವರು, “ಘಟನೆ ಬೆಳಕಿಗೆ ಬಂದ ತಕ್ಷಣವೇ ಪ್ರಾಂಶುಪಾಲರು ಮತ್ತು ನೋಡಲ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇದರಲ್ಲಿ ಭಾಗಿಯಾದ ಪ್ಯೂನ್ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನುಪಮ್ ರಾಜನ್ ಮಾತನಾಡಿ, “ಪಿಪರಿಯಾದ ಶಹೀದ್ ಭಗತ್ ಸಿಂಗ್ ಕಾಲೇಜಿನಲ್ಲಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿತ್ತು. ಈ ವೇಳೆ ನಾಲ್ಕನೇ ದರ್ಜೆ ನೌಕರರೊಬ್ಬರು ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುತ್ತಿರುವ ವಿಡಿಯೋ ಬೆಳಕಿಗೆ ಬಂದಿದೆ. ತಕ್ಷಣ ಹಿರಿಯ ಅಧಿಕಾರಿಗಳ ಸಮಿತಿಯನ್ನು ರಚಿಸಿ ತನಿಖೆ ನಡೆಸಲಾಗಿದೆ. ಇದರ ಆಧಾರದ ಮೇಲೆ ಕಾಲೇಜಿನ ಪ್ರಾಂಶುಪಾಲರನ್ನು ನಿರ್ಲಕ್ಷ್ಯಕ್ಕಾಗಿ ಅಮಾನತುಗೊಳಿಸಲಾಗಿದೆ. ಮೌಲ್ಯಮಾಪನ ಕಾರ್ಯದ ನೋಡಲ್ ಅಧಿಕಾರಿಯಾಗಿದ್ದ ರಾಮ್ ಗುಲಾಮ್ ಪಟೇಲ್ ಅವರನ್ನು ಸಹ ಅಮಾನತು ಮಾಡಲಾಗಿದೆ” ಎಂದು ವಿವರಿಸಿದರು.

“ಇದರ ಜೊತೆಗೆ, ಮೂಲತಃ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಬೇಕಿದ್ದ ಅತಿಥಿ ಉಪನ್ಯಾಸಕಿ ಖುಷ್ಬೂ ಪಗಾರೆ ಅವರು ಆರೋಗ್ಯ ಸರಿಯಿಲ್ಲದ ಕಾರಣ ಗೈರುಹಾಜರಾಗಿದ್ದರು. ಅವರನ್ನು ಸೇವೆಯಿಂದ ವಜಾ ಮಾಡಲಾಗಿದೆ. ಮೌಲ್ಯಮಾಪನ ಮಾಡಿದ ಪನ್ನಾಲಾಲ್ ಪಥಾರಿಯಾ ಮತ್ತು ಸಹಾಯ ಮಾಡಿದ ರಾಕೇಶ್ ಮೆಹರ್ ಅವರನ್ನೂ ಸೇವೆಯಿಂದ ವಜಾ ಮಾಡಲಾಗಿದೆ. ಒಟ್ಟಾರೆಯಾಗಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ ಮತ್ತು ಮೂವರನ್ನು ಸೇವೆಯಿಂದ ವಜಾ ಮಾಡಲಾಗಿದೆ” ಎಂದು ಅವರು ತಿಳಿಸಿದರು.

ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸಿಎಸ್ ರಾಜನ್, ವಿದ್ಯಾರ್ಥಿಗಳಿಗೆ ಯಾವುದೇ ನಷ್ಟವಾಗದಂತೆ ನೋಡಿಕೊಳ್ಳಲಾಗುವುದು. ಈ ಹಿಂದೆ ಮೌಲ್ಯಮಾಪನ ಮಾಡಿದ ಪತ್ರಿಕೆಗಳನ್ನು ಸಮರ್ಥ ವ್ಯಕ್ತಿಗಳಿಂದ ಮರು ಮೌಲ್ಯಮಾಪನ ಮಾಡಲಾಗುವುದು ಎಂದು ಭರವಸೆ ನೀಡಿದರು. ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read