ಹಣ ಜೀವನದ ಅವಶ್ಯಕತೆ. ನಾವು ಒಬ್ಬರಿಗೊಬ್ಬರು ಸಹಾಯ ಮಾಡುವುದು ಸಹಜ. ಕೆಲವೊಮ್ಮೆ ನಾವು ಹಣವನ್ನು ಸಾಲವಾಗಿ ನೀಡುತ್ತೇವೆ ಅಥವಾ ಪಡೆಯುತ್ತೇವೆ. ಕೊಟ್ಟ ಹಣವನ್ನು ಸಮಯಕ್ಕೆ ಮರಳಿಸಿದರೆ ಸಂಬಂಧಗಳು ಗಟ್ಟಿಯಾಗಿರುತ್ತವೆ. ಆದರೆ, ಅನೇಕ ಬಾರಿ ಜನರು ಸಾಲ ಪಡೆದು ವಾಪಸ್ ನೀಡುವುದಿಲ್ಲ. ಕೇಳಿದರೂ ನಿರ್ಲಕ್ಷ್ಯ ವಹಿಸುತ್ತಾರೆ. ನಿಮ್ಮ ಕಷ್ಟದ ಹಣವನ್ನು ಯಾರಾದರೂ ಹಿಂತಿರುಗಿಸದಿದ್ದರೆ ಏನು ಮಾಡಬೇಕು?
ನೀವು ಯಾರಿಗಾದರೂ ಸಣ್ಣ ಮೊತ್ತದ (100-200 ರೂ. ಅಥವಾ 1000-2000 ರೂ.) ಸಾಲ ನೀಡಿದ್ದರೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಆದರೆ, 50 ಸಾವಿರ, 1 ಲಕ್ಷ ಅಥವಾ 5 ಲಕ್ಷದಂತಹ ದೊಡ್ಡ ಮೊತ್ತವನ್ನು ನೀಡಿದ್ದು, ಅವರು ಹಿಂದಿರುಗಿಸಲು ಸತಾಯಿಸುತ್ತಿದ್ದರೆ ಅಥವಾ ನಿರಾಕರಿಸುತ್ತಿದ್ದರೆ ನೀವು ಕಾನೂನಿನ ಮೊರೆ ಹೋಗುವುದು ಅನಿವಾರ್ಯ.
ಹಣವನ್ನು ಹಿಂತಿರುಗಿಸದಿದ್ದರೆ ತಕ್ಷಣ ವಕೀಲರನ್ನು ಸಂಪರ್ಕಿಸಿ. ಕಾನೂನು ಕ್ರಮ ಕೈಗೊಳ್ಳಲು ಅವರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ನೀವು ಸಾಲ ನೀಡಿದ ಮತ್ತು ಅವರು ನಿರಾಕರಿಸುತ್ತಿರುವ ಬಗ್ಗೆ ನಿಮ್ಮ ಬಳಿ ಇರುವ ದಾಖಲೆಗಳು (ಕರೆ ಅಥವಾ ಸಂದೇಶಗಳ ಪುರಾವೆ) ಬಹಳ ಮುಖ್ಯ.
ಮೊದಲಿಗೆ, ವಕೀಲರ ಮೂಲಕ ಸಾಲ ಪಡೆದ ವ್ಯಕ್ತಿಗೆ ಲೀಗಲ್ ನೋಟಿಸ್ ಕಳುಹಿಸಿ. ಅದಕ್ಕೂ ಅವರು ಸ್ಪಂದಿಸದಿದ್ದರೆ, ಸಿವಿಲ್ ಮೊಕದ್ದಮೆ ಹೂಡಬಹುದು. ನಿಮ್ಮ ವಕೀಲರು ಈ ಪ್ರಕ್ರಿಯೆಯಲ್ಲಿ ಸಹಾಯ ಮಾಡುತ್ತಾರೆ. ನೀವು ‘ಸಮ್ಮರಿ ರಿಕವರಿ ಸೂಟ್’ (Summary Recovery Suit) ದಾಖಲಿಸಿ ನಿಮ್ಮ ಹಣವನ್ನು ನ್ಯಾಯಾಲಯದ ಮೂಲಕ ಮರಳಿ ಪಡೆಯಬಹುದು. ನ್ಯಾಯಾಲಯವು ಸಾಲಗಾರನಿಗೆ ಹಣ ಹಿಂದಿರುಗಿಸಲು ಆದೇಶಿಸಬಹುದು. ಇದು ನಿಮ್ಮ ಹಣವನ್ನು ಮರಳಿ ಪಡೆಯಲು ಸಹಾಯಕವಾಗುತ್ತದೆ.