ಬೆಂಗಳೂರು : ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಾರಿಗೊಳಿಸುತ್ತಿರುವ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಹಿಂದುಳಿದ ವರ್ಗಗಳಿಗೂ ವಿಸ್ತರಣೆ ಮಾಡಲಾಗಿದೆ. ಯೋಜನೆಗೆ ಪ್ರವರ್ಗ-1, 2ಎ, 3ಎ ಮತ್ತು 3ಬಿ ಗೆ ಸೇರಿದ ಪಾರಂಪರಿಕ ವೃತ್ತಿಯಲ್ಲಿ ತೊಡಗಿರುವ 38 ವರ್ಗಗಳು ಹಾಗೂ ಅಲೆಮಾರಿ ಮತ್ತು ಅರೆ ಅಲೆಮಾರಿ ಪಂಗಡಗಳ ಕುಲ ಕಸುಬಿನಲ್ಲಿ ತೊರಗಿರುವ 27 ವರ್ಗಗಳ ಕಾರ್ಮಿಕರು ಸೇರಿದಂತೆ ಒಟ್ಟು 65 ಅಸಂಘಟಿತ ಕಾರ್ಮಿಕರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಈ ಮೊದಲು ಗುರುತಿಸಿ 26 ವಿಧದ ಅಸಂಘಟಿತ ಕಾರ್ಮಿಕರು ಸೇರಿದಂತೆ ಒಟ್ಟಾರೆ 91 ವರ್ಗಗಳ ಅಸಂಘಟಿತ ಕಾರ್ಮಿಕರು ಮಂಡಳಿ ಜಾಲತಾಣ www.ksuwssb.karnataka.gov.in ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ನೋಂದಾಯಿಸಿಕೊಂಡು ಸೌಲಭ್ಯ ಪಡೆಯಹುದು.
ಯೋಜನೆ ರಾಜ್ಯದ ನಿವಾಸಿಗಳ ಮಾತ್ರ ಅನ್ವಯವಾಗುತ್ತದೆ. ಅರ್ಜಿದಾರರ ವಯೋಮಿತಿ 18 ರಿಂದ 60 ವರ್ಷದ ಒಳಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಹುದು. ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು. ನೋಂದಣಿ ಸಂದರ್ಭದಲ್ಲಿ ಪಾಸ್ ಪೋರ್ಟ್ ಅಳೆತಯ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್, ಲಭ್ಯವಿದ್ದಲ್ಲಿ ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ವಯಸ್ಸಿನ ಧೃಡಿಕರಣಕ್ಕಾಗಿ ಆಧಾರ್, ಶಾಲಾ ದಾಖಲೆ, ಜನನ ಪ್ರಮಾಣ ಪತ್ರ, ಚಾಲನಾ ಪರವಾನಿಗೆ ಸೇರಿದಂತೆ ಇತರೆ ದಾಖಲೆಗಳನ್ನು ನೋಂದಣಿ ವೇಳೆ ಅಪ್ಲೋಡ್ ಮಾಡಬೇಕು.
ಯೋಜನೆಯಡಿ ನೋಂದಣಿಯಾದ ಕಾರ್ಮಿಕರಿಗೆ ಅಪಘಾತ ಪರಿಹಾರವಾಗಿ ಮರಣ ಹೊಂದಿದಲ್ಲಿ ನಾಮ ನಿರ್ದೇಶಿತರಿಗೆ ರೂ.1 ಲಕ್ಷ ಪರಿಹಾರ, ಅಪಘಾತದಲ್ಲಿ ಸಂಪೂರ್ಣ ಅಥವಾ ಭಾಗಶಃ ದುರ್ಬಲತೆ ಹೊಂದಿದಲ್ಲಿ ಶೇಕಡವಾರು ದುರ್ಬಲತೆ ಆಧಾರದ ಮೇಲೆ ರೂ.1 ಲಕ್ಷ ವರೆಗೆ ಪರಿಹಾರ, ರೂ.50 ಸಾವಿರವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ದೊರಕಲಿದೆ.ನೋಂದಾಯಿತ ಫಲಾನುಭವಿಯು ವಯೋಸಹಜ, ಅಕಾಲಿಕ, ಖಾಯಿಲೆ ಅಥವಾ ಇನ್ನಿತರ ಕಾರಣಗಳಿಂದ ಮರಣ ಹೊಂದಿದರೆ ಅಂತ್ಯಕ್ರಿಯೆ ವೆಚ್ಚಗಳಿಗಾಗಿ ಕುಟುಂಬದವರಿಗೆ ರೂ.10 ಸಾವಿರ ಸಹಾಯಧನ ನೀಡಲಾಗುವುದು. ಅಪಘಾತ ಪರಿಹಾರಕ್ಕಾಗಿ 1 ವರ್ಷದೊಳಗೆ ಹಾಗೂ ಅಂತ್ಯಕ್ರಿಯೆ ವೆಚ್ಚಕ್ಕಾಗಿ 6 ತಿಂಗಳ ಅವಧಿಯೊಳಗೆ ಸೇವಾ ಸಿಂದು ಪೋರ್ಟಲ್ ಮೂಲಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು ಅಥವಾ ತಾಲ್ಲೂಕು ಮಟ್ಟದ ಕಾರ್ಮಿಕ ಇಲಾಖೆ ಕಚೇರಿಗಳಿಗೆ ಭೇಟಿ ನೀಡಬಹುದು. ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.