ಅಮೆರಿಕ ಮತ್ತು ಚೀನಾ ನಡುವಿನ ತೀವ್ರ ವಾಗ್ವಾದದ ನಡುವೆಯೇ, ಡೊನಾಲ್ಡ್ ಟ್ರಂಪ್ ಬುಧವಾರ ದಿಢೀರ್ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಎಲ್ಲಾ ರಾಷ್ಟ್ರಗಳಿಗೂ ಸದ್ಯಕ್ಕೆ ನೆಮ್ಮದಿ ನೀಡುವಂತೆ ಕಂಡರೂ, ಚೀನಾ ವಿರುದ್ಧದ ತಮ್ಮ ಕಠಿಣ ನಿಲುವನ್ನು ಅವರು ಮತ್ತಷ್ಟು ಬಲಪಡಿಸಿದ್ದಾರೆ.
ಮೊದಲಿಗೆ, ಅಮೆರಿಕವು ಚೀನಾ ಮೇಲಿನ ಸುಂಕವನ್ನು ಶೇಕಡಾ 104ಕ್ಕೆ ಏರಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಬೀಜಿಂಗ್ ಕೂಡಾ ಅಮೆರಿಕದ ಆಮದುಗಳ ಮೇಲೆ ಶೇಕಡಾ 84ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿತು. ಇದು ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಸಮರವನ್ನು ತೀವ್ರಗೊಳಿಸಿತು.
ಆದರೆ ಅಮೆರಿಕದ ಪ್ರತಿದಾಳಿ ತಕ್ಷಣವೇ ಮತ್ತು ತೀಕ್ಷ್ಣವಾಗಿತ್ತು. ಅಧ್ಯಕ್ಷ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮವಾದ ಟ್ರೂತ್‌ಸೋಷಲ್‌ನಲ್ಲಿ ಚೀನಾ ಮೇಲಿನ ಸುಂಕವನ್ನು ತಕ್ಷಣದಿಂದಲೇ ಶೇಕಡಾ 125ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದರು. “ಒಂದು ಹಂತದಲ್ಲಿ, ಶೀಘ್ರದಲ್ಲೇ ಚೀನಾ ಅಮೆರಿಕ ಮತ್ತು ಇತರ ದೇಶಗಳನ್ನು ಲೂಟಿ ಮಾಡುವ ದಿನಗಳು ಇನ್ನು ಮುಂದೆ ನಡೆಯುವುದಿಲ್ಲ ಎಂದು ಅರಿತುಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಟ್ರಂಪ್ ಬರೆದಿದ್ದಾರೆ.
ಆದರೆ ಇತರ ದೇಶಗಳಿಗೆ ಟ್ರಂಪ್ ಕೊಂಚ ಸಮಾಧಾನಕರ ಸುದ್ದಿಯನ್ನೂ ನೀಡಿದ್ದಾರೆ. ಮೂಲ ದರವಾದ ಶೇಕಡಾ 10ರ ಮೇಲಿನ ಎಲ್ಲಾ ಸುಂಕಗಳನ್ನೂ 90 ದಿನಗಳವರೆಗೆ ಸ್ಥಗಿತಗೊಳಿಸುವುದಾಗಿ ಅವರು ತಿಳಿಸಿದ್ದಾರೆ. 75ಕ್ಕೂ ಹೆಚ್ಚು ದೇಶಗಳು ಅಮೆರಿಕದೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸಿವೆ ಮತ್ತು ಯಾವುದೇ ರೀತಿಯ ಪ್ರತೀಕಾರ ಕ್ರಮ ಕೈಗೊಂಡಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಈ ದೇಶಗಳು ತಮ್ಮ “ಬಲವಾದ ಸೂಚನೆ”ಯನ್ನು ಪಾಲಿಸಿವೆ ಎಂದೂ ಅವರು ಸಮರ್ಥಿಸಿಕೊಂಡಿದ್ದಾರೆ.
“ಪ್ರತಿಯಾಗಿ, 75ಕ್ಕೂ ಹೆಚ್ಚು ದೇಶಗಳು ವಾಣಿಜ್ಯ, ಖಜಾನೆ ಮತ್ತು ಯುಎಸ್‌ಟಿಆರ್ (ಯುನೈಟೆಡ್ ಸ್ಟೇಟ್ಸ್ ಟ್ರೇಡ್ ರೆಪ್ರೆಸೆಂಟೇಟಿವ್) ಸೇರಿದಂತೆ ಅಮೆರಿಕದ ಪ್ರತಿನಿಧಿಗಳನ್ನು ಕರೆದು ವ್ಯಾಪಾರ, ವ್ಯಾಪಾರ ಅಡೆತಡೆಗಳು, ಸುಂಕಗಳು, ಕರೆನ್ಸಿ ನಿರ್ವಹಣೆ ಮತ್ತು ಹಣೇತರ ಸುಂಕಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಪರಿಹಾರವನ್ನು ಮಾತುಕತೆ ಮಾಡಲು ಬಯಸಿವೆ. ನನ್ನ ಬಲವಾದ ಸೂಚನೆಯ ಮೇರೆಗೆ ಈ ದೇಶಗಳು ಅಮೆರಿಕದ ವಿರುದ್ಧ ಯಾವುದೇ ರೀತಿಯ ಪ್ರತೀಕಾರ ಕ್ರಮ ಕೈಗೊಂಡಿಲ್ಲದ ಕಾರಣ, ನಾನು ತಕ್ಷಣದಿಂದಲೇ ಜಾರಿಗೆ ಬರುವಂತೆ 90 ದಿನಗಳ ಕಾಲ ಸುಂಕವನ್ನು ಸ್ಥಗಿತಗೊಳಿಸಲು ಮತ್ತು ಈ ಅವಧಿಯಲ್ಲಿ ಗಣನೀಯವಾಗಿ ಕಡಿಮೆಗೊಳಿಸಿದ ಶೇಕಡಾ 10ರ ಪರಸ್ಪರ ಸುಂಕವನ್ನು ವಿಧಿಸಲು ಅನುಮತಿ ನೀಡಿದ್ದೇನೆ. ಈ ವಿಷಯಕ್ಕೆ ಗಮನ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು!” ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ಮೇಲಿನ ಪರಿಣಾಮ
ಭಾರತವು ಟ್ರಂಪ್ ಅವರ ಸುಂಕಗಳ ಬಗ್ಗೆ ಎಚ್ಚರಿಕೆಯ ನಿಲುವು ತಳೆದಿದೆ. ಕಳೆದ ವಾರ ಶೇಕಡಾ 26ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದರೂ, ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂದು ಭಾರತ ಸ್ಪಷ್ಟಪಡಿಸಿದೆ.
“ಮೂರನೇ ತಾರೀಖಿನಂದು, ವಾಣಿಜ್ಯ ಸಚಿವಾಲಯವು ವಿವರವಾದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿತು. ಅದರಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಲಾಗಿದೆ. ಘೋಷಿಸಲಾದ ಸುಂಕಗಳ ಪರಿಣಾಮಗಳನ್ನು ನಾವು ಅಧ್ಯಯನ ಮಾಡುತ್ತಿದ್ದೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಬುಧವಾರ ಹೇಳಿದ್ದಾರೆ.
“ಪರಸ್ಪರ ಸುಂಕಗಳು ಮತ್ತು ಭಾರತ ಹಾಗೂ ಅಮೆರಿಕದ ವ್ಯಾಪಾರ ತಂಡಗಳ ನಡುವೆ ತ್ವರಿತವಾಗಿ ಮತ್ತು ಪರಸ್ಪರ ಲಾಭದಾಯಕವಾದ ಬಹು-ಕ್ಷೇತ್ರೀಯ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ತೀರ್ಮಾನಿಸಲು ಮಾತುಕತೆಗಳು ನಡೆಯುತ್ತಿವೆ. ಭಾರತವು ಅಮೆರಿಕದೊಂದಿಗಿನ ತನ್ನ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಗೌರವಿಸುತ್ತದೆ ಮತ್ತು ಅದರೊಂದಿಗೆ ನಿಕಟವಾಗಿ ಕೆಲಸ ಮಾಡಲು ಬದ್ಧವಾಗಿದೆ. ಎರಡೂ ತಂಡಗಳು ಚರ್ಚೆಯಲ್ಲಿವೆ ಮತ್ತು ನಾವು ಶೀಘ್ರದಲ್ಲೇ ಒಪ್ಪಂದವನ್ನು ಮುಕ್ತಾಯಗೊಳಿಸಬಹುದು ಎಂದು ಆಶಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಸುಂಕ ಘೋಷಣೆಯ ನಂತರ ಕುಸಿದಿದ್ದ ಭಾರತೀಯ ಮಾರುಕಟ್ಟೆಗಳಿಗೆ ಈ ವಿರಾಮವು ಕೊಂಚ ನೆಮ್ಮದಿ ನೀಡುವ ಸಾಧ್ಯತೆ ಇದೆ. ಅಲ್ಲದೆ, ಸುಂಕಗಳು ಮತ್ತೆ ಜಾರಿಗೆ ಬಂದರೆ ಅವುಗಳನ್ನು ಹೇಗೆ ಎದುರಿಸುವುದು ಎಂಬುದರ ಬಗ್ಗೆ ಚಿಂತಿಸಲು ಮತ್ತು ಅಮೆರಿಕದೊಂದಿಗೆ ಒಪ್ಪಂದವನ್ನು ಪೂರ್ಣಗೊಳಿಸಲು ನವದೆಹಲಿಗೆ ಹೆಚ್ಚಿನ ಸಮಯ ಸಿಗಲಿದೆ.
ಹಿಂದೇಟು ?
ಚೀನಾವನ್ನು ಹೊರತುಪಡಿಸಿ, ಬಹುತೇಕ ಜಗತ್ತಿಗೆ ಈ ವಿರಾಮವು ಒಳ್ಳೆಯದಾಗಿದ್ದರೂ, ಟ್ರಂಪ್ ಆಡಳಿತದ ಸುಂಕ ನೀತಿಯಲ್ಲಿನ ಅನಿಶ್ಚಿತತೆಯನ್ನು ಇದು ಸೂಚಿಸುತ್ತದೆ. ಅಮೆರಿಕದ ಮಾರುಕಟ್ಟೆಗಳು ದಾಖಲೆಯ ನಷ್ಟವನ್ನು ಅನುಭವಿಸಿದರೂ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಮತ್ತು ಅಲ್ಪಾವಧಿಯ ನೋವಿನ ನಂತರ ದೀರ್ಘಾವಧಿಯ ಲಾಭ ಇರುತ್ತದೆ ಎಂದು ಹೇಳಿದ್ದ ಟ್ರಂಪ್ ಅವರ ಈ ವಿರಾಮವು ಹಠಾತ್ ಬದಲಾವಣೆಯನ್ನು ಸೂಚಿಸುತ್ತದೆ.
ಸುಂಕಗಳನ್ನು ಶಾಶ್ವತ ಕ್ರಮವಾಗಿ ವಿಧಿಸಲಾಗಿದೆಯೇ ಅಥವಾ ದೇಶಗಳನ್ನು ಮಾತುಕತೆಯ ಮೇಜಿಗೆ ತರಲು ಬಳಸಲಾಗಿದೆಯೇ ಎಂಬ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಈ ಬಗ್ಗೆ ಟ್ರಂಪ್ ಅವರ ಪ್ರಮುಖ ಸಹಾಯಕರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸ್ವತಃ ಅಧ್ಯಕ್ಷ ಟ್ರಂಪ್ ಅವರ ಉತ್ತರವೂ ಅಸ್ಪಷ್ಟವಾಗಿದ್ದು, ಅನಿಶ್ಚಿತತೆಯನ್ನು ಹೆಚ್ಚಿಸಿದೆ. “ಶಾಶ್ವತ ಸುಂಕಗಳೂ ಇರಬಹುದು – ಮತ್ತು ಮಾತುಕತೆಗಳೂ ಇರಬಹುದು ಏಕೆಂದರೆ ಸುಂಕಗಳ ಹೊರತಾಗಿ ನಮಗೆ ಬೇಕಾದ ವಿಷಯಗಳಿವೆ” ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು.
ಆದರೆ ಬುಧವಾರ, ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸ್ಸೆಂಟ್ ಅವರು ಡೊನಾಲ್ಡ್ ಟ್ರಂಪ್ ಅವರ “ತಂತ್ರ” ಯೋಜನೆಯ ಪ್ರಕಾರವೇ ನಡೆದಿದೆ ಎಂದು ಹೇಳಿದ್ದಾರೆ. “ಇದು ಅವರ ಮೊದಲಿನಿಂದಲೂ ಇದ್ದ ತಂತ್ರವಾಗಿತ್ತು, ಮತ್ತು ಅವರು ಚೀನಾವನ್ನು ಕೆಟ್ಟ ಪರಿಸ್ಥಿತಿಗೆ ತಳ್ಳಿದರು ಎಂದೂ ನೀವು ಹೇಳಬಹುದು” ಎಂದು ಬೆಸ್ಸೆಂಟ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ.
NEW TRUTH SOCIAL FROM PRESIDENT TRUMP:
— The White House (@WhiteHouse) April 9, 2025
🇨🇳125% TARIFF ON CHINA
🌎90-DAY PAUSE & LOWERED 10% RECIPROCAL TARIFF FOR OTHER COUNTRIES
🚨EFFECTIVE IMMEDIATELY pic.twitter.com/Gt5Bd6276m