ಅಹಮದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೌರವ ಸಲ್ಲಿಸಿದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ರಾಹುಲ್ ಗಾಂಧಿ ಅವರು ಪಟೇಲರ ಪ್ರತಿಮೆಗೆ ಗೌರವಯುತವಾಗಿ ಹೂಮಾಲೆ ಹಾಕುವ ಬದಲು ಅದನ್ನು ಎಸೆದಂತೆ ಕಾಣುವ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿಷ್ಣು ವರ್ಧನ್ ರೆಡ್ಡಿ ಈ ವಿಡಿಯೊವನ್ನು ಹಂಚಿಕೊಂಡು ರಾಹುಲ್ ಗಾಂಧಿಯವರ ವರ್ತನೆಯನ್ನು ಖಂಡಿಸಿದ್ದಾರೆ. “ಹೀಗೆ ಗೌರವ ಸಲ್ಲಿಸುತ್ತಾರೆಯೇ ? ರಾಹುಲ್ ಗಾಂಧಿ ಯಾವುದೇ ಗೌರವವಿಲ್ಲದೆ ಹೂಮಾಲೆ ಎಸೆಯುತ್ತಾರೆ. ಇದು ಅವರ ದುರಹಂಕಾರವನ್ನು ತೋರಿಸುತ್ತದೆ” ಎಂದು ಅವರು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಅವರನ್ನು ‘ಹೊಣೆಗೇಡಿ’ ಎಂದು ಕರೆದರೆ, ಇನ್ನು ಕೆಲವರು ‘ರಾಜಮನೆತನದ ಅಹಂ’ ಎಂದು ಜರೆದಿದ್ದಾರೆ. “ಇದು ಔಪಚಾರಿಕತೆಯಲ್ಲ, ಮೂರ್ಖತನ” ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಡಿಯೊ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಸ್ತುಸಂಗ್ರಹಾಲಯದಲ್ಲಿ ನಡೆದ ಸಿಡಬ್ಲ್ಯುಸಿ ಸಭೆಯದ್ದಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಟೇಲರಿಗೆ ಗೌರವ ಸಲ್ಲಿಸಿದ್ದು, ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದ್ದಾರೆ. ಅಲ್ಲದೆ, ಆರ್‌ಎಸ್‌ಎಸ್ ಮತ್ತು ಪಟೇಲರ ಸಿದ್ಧಾಂತಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ್ದಾರೆ.
ಖರ್ಗೆ ಅವರು ರಾಹುಲ್ ಗಾಂಧಿಯವರ ಕೃತ್ಯವನ್ನು ನೇರವಾಗಿ ಸಮರ್ಥಿಸದಿದ್ದರೂ, ಪಕ್ಷದ ಇತಿಹಾಸ ಮತ್ತು ಹೋರಾಟದ ಬಗ್ಗೆ ಮಾತನಾಡಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ರಾಹುಲ್ ಗಾಂಧಿಯವರ ವರ್ತನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇದು ಕಾಂಗ್ರೆಸ್ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದೆ.
Who pays tribute like this?
— Vishnu Vardhan Reddy (@SVishnuReddy) April 8, 2025
Rahul Gandhi throws the garland with zero respect. So much attitude, no values. pic.twitter.com/WzyHqw7JK9