ಬೆಂಗಳೂರು: ಸಾರ್ವಜನಿಕರು ನಿತ್ಯ ಬಳಸುವ ವಿವಿಧ ಪದಾರ್ಥಗಳ ಗುಣಮಟ್ಟ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಮುಂದುವರಿಸಿದೆ.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಗೆ ಔಷಧಗಳು ಕೂಡ ಸುರಕ್ಷಿತವಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ. ಔಷಧ ಆಡಳಿತ ವಿಭಾಗದ ಅಮಲು ಜಾರಿ ಅಧಿಕಾರಿಗಳು ಸಾರ್ವಜನಿಕ ಹಿತದೃಷ್ಟಿಯಿಂದ ಮಾರ್ಚ್ ನಲ್ಲಿ 1891 ಮಾದರಿಗಳ ತಪಾಸಣೆ ಮಾಡಿದ್ದಾರೆ. ಅದರಲ್ಲಿ 1298 ಗುಣಮಟ್ಟದ ಔಷಧಿಗಳು, 41 ಗುಣಮಟ್ಟದವಲ್ಲದ ಔಷಧಗಳು ಎನ್ನುವುದು ಗೊತ್ತಾಗಿದೆ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, 41 ಔಷಧ ಕಂಪನಿಗಳ ವಿರುದ್ಧ JMFC ಕೋರ್ಟ್ ನಲ್ಲಿ ಮೊಕದ್ದಮೆ ಹೂಡಲಾಗುವುದು. ಫೆಬ್ರವರಿಯಲ್ಲಿ 10, ಮಾರ್ಚ್ ನಲ್ಲಿ 18, ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ರಿಂಗರ್ ಲ್ಯಾಕ್ಟೇಟ್ ದ್ರಾವಣಕ್ಕೆ ಸಂಬಂಧಿಸಿದಂತೆ 196 ಬ್ಯಾಚ್ 113 ಗುಣಮಟ್ಟವಿಲ್ಲದ್ದು ಎಂದು ಘೋಷಿತವಾಗಿದ್ದು ಈ ಬಗ್ಗೆ ವಿವಿಧ ನ್ಯಾಯಾಲಯಗಳಲ್ಲಿ 78 ಮೊಕದ್ದಮೆ ದಾಖಲಿಸಲಾಗಿದೆ. ನಿಯಮ ಉಲ್ಲಂಘನೆಗಾಗಿ ವಿವಿಧ ತಯಾರಿಕ ಸಂಸ್ಥೆಗಳ ವಿರುದ್ಧ 43 ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಆರೋಗ್ಯ ಇಲಾಖೆಯಿಂದ 255 ವಾಟರ್ ಬಾಟಲ್ ಗಳ ತಪಾಸಣೆ ಮಾಡಿದ್ದು, 72 ಮಾದರಿ ಸುರಕ್ಷಿತ, 95 ಅಸುರಕ್ಷಿತ, 88 ಕಳಪೆ ಗುಣಮಟ್ಟದ ಬಾಟಲಿ ಎನ್ನುವುದು ದೃಢಪಟ್ಟಿದೆ. ಈ ಬಗ್ಗೆ ಕೆಮಿಕಲ್ ಮತ್ತು ಬಯೋಗ್ರಾಫಿಕಲ್ ವರದಿ ಕೂಡ ಬಂದಿದ್ದು, ಉಳಿದ ಬಾಟಲ್ ಗಳ ವರದಿ ಬರಬೇಕಿದೆ ಎಂದು ಹೇಳಿದ್ದಾರೆ.
ಸಿಹಿ ತಿಂಡಿ, ತಂಪು ಪಾನೀಯ, ಜ್ಯೂಸ್, ಪನ್ನೀರ್, ಬಟಾಣಿ ಮಾದರಿಗಳ ಪರಿಶೀಲನೆ ನಡೆಸಲಾಗಿದೆ. ಇವುಗಳಲ್ಲಿ ಅನೇಕ ಮಾದರಿಗಳು ಅಸುರಕ್ಷಿತ ಎನ್ನುವ ವರದಿ ಬಂದಿದ್ದು, ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗಿದೆ.