ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ನಡುವೆ ಜನತೆಗೆ ಮತ್ತೊಂದು ಬೆಲೆ ಏರಿಕೆ ಬಿಸಿ ತಟ್ಟಿದೆ. ಅಡುಗೆ ಅನಿಲ ದರವನ್ನು 50 ರೂ. ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಉಜ್ವಲ ಯೋಜನೆ ಸಿಲಿಂಡರ್ ಗಳಿಗೂ ಇದು ಅನ್ವಯವಾಗಲಿದೆ.
ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಅಡುಗೆ ಅನಿಲ ಅಥವಾ ಎಲ್ಪಿಜಿ ಬೆಲೆಯನ್ನು ವಿತರಣಾ ಕಂಪನಿಗಳು ಪ್ರತಿ ಸಿಲಿಂಡರ್ಗೆ 50 ರೂ. ಹೆಚ್ಚಿಸಿವೆ ಎಂದು ಹೇಳಿದ್ದಾರೆ. ಇದರೊಂದಿಗೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ(ಪಿಎಂಯುವೈ) ಫಲಾನುಭವಿಗಳಿಗೆ ಎಲ್ಪಿಜಿ ಸಿಲಿಂಡರ್ನ ಬೆಲೆ 500 ರೂ.ಗಳಿಂದ 550 ರೂ.ಗಳಿಗೆ ಏರಲಿದೆ. ಇತರರಿಗೆ, ಎಲ್ಪಿಜಿ ಸಿಲಿಂಡರ್ನ ಬೆಲೆ 803 ರೂ.ಗಳಿಂದ 853 ರೂ.ಗಳಿಗೆ ಏರಲಿದೆ.
ಕೆಲವು ವಾರಗಳ ನಂತರ ನಿರ್ಧಾರವನ್ನು ಪರಿಶೀಲಿಸಲಾಗುವುದು. ಇದು ನಾವು ಮುಂದುವರಿಯುತ್ತಿದ್ದಂತೆ ಪರಿಶೀಲಿಸುವ ಒಂದು ಹಂತವಾಗಿದೆ. ನಾವು ಪ್ರತಿ 2-3 ವಾರಗಳಿಗೊಮ್ಮೆ ಇವುಗಳನ್ನು ಪರಿಶೀಲಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.