ದೇಶದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬದ ಐಷಾರಾಮಿ ನಿವಾಸ ‘ಆಂಟಿಲಿಯಾ’ ಇದೀಗ ಹಳೆಯ ಭೂಮಿ ವಿವಾದವೊಂದರಿಂದಾಗಿ ಸುದ್ದಿಯಲ್ಲಿದೆ. ಸುಮಾರು 15 ಸಾವಿರ ಕೋಟಿ ರೂಪಾಯಿ ಮೌಲ್ಯದ ಈ ಭವ್ಯ ಬಂಗಲೆಯು ವಕ್ಫ್ ಮಂಡಳಿಗೆ ಸೇರಿದ ಭೂಮಿಯಲ್ಲಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.
ವರದಿಗಳ ಪ್ರಕಾರ, ಮುಕೇಶ್ ಅಂಬಾನಿ, 2002ರಲ್ಲಿ ಸುಮಾರು 21 ಕೋಟಿ ರೂಪಾಯಿಗಳಿಗೆ ನಾಲ್ಕೂವರೆ ಲಕ್ಷ ಚದರ ಅಡಿ ವಿಸ್ತೀರ್ಣದ ಭೂಮಿಯನ್ನು ವಕ್ಫ್ ಮಂಡಳಿಯಿಂದ ಖರೀದಿಸಿದ್ದರು. ಆದರೆ, ವಕ್ಫ್ ಮಂಡಳಿಯ ಆಸ್ತಿಯನ್ನು ಖಾಸಗಿ ಉದ್ದೇಶಕ್ಕೆ ಮಾರಾಟ ಮಾಡುವಂತಿಲ್ಲ ಎಂಬ ನಿಯಮದಿಂದಾಗಿ ಈ ಭೂಮಿ ಖರೀದಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಈ ಭೂಮಿಯನ್ನು ಧಾರ್ಮಿಕ ಶಿಕ್ಷಣ ಮತ್ತು ಅನಾಥಾಶ್ರಮ ನಿರ್ಮಾಣಕ್ಕಾಗಿ ವಕ್ಫ್ ಮಂಡಳಿಗೆ ನೀಡಲಾಗಿತ್ತು ಎಂಬುದು ಹಿಂದಿನ ಮಾಲೀಕರ ವಾದವಾಗಿದೆ.
ಈ ಕುರಿತಾದ ಪ್ರಕರಣವು ಸುದೀರ್ಘ ಕಾಲದಿಂದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಒಂದು ವೇಳೆ ತೀರ್ಪು ಅಂಬಾನಿ ಕುಟುಂಬದ ವಿರುದ್ಧ ಬಂದರೆ, ಅವರು ‘ಆಂಟಿಲಿಯಾ’ವನ್ನು ತೆರವುಗೊಳಿಸಬೇಕಾಗಬಹುದು ಎಂಬ ಆತಂಕ ಎದುರಾಗಿದೆ.
ಇತ್ತೀಚೆಗೆ, ರಾಷ್ಟ್ರಪತಿಗಳು ವಕ್ಫ್ ತಿದ್ದುಪಡಿ ಮಸೂದೆಗೆ ಅಂಕಿತ ಹಾಕಿದ್ದಾರೆ. ಈ ಬೆಳವಣಿಗೆಯು ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಮಹತ್ವ ಪಡೆದುಕೊಂಡಿದೆ. ಕೋರ್ಟ್ನ ಅಂತಿಮ ತೀರ್ಪು ಅಂಬಾನಿ ಕುಟುಂಬಕ್ಕೆ ನಿರ್ಣಾಯಕವಾಗಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ‘ಆಂಟಿಲಿಯಾ’ದ ಭವಿಷ್ಯ ಏನಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.