ಬೆಂಗಳೂರು: ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ, ಸಂಸದ ಸಾಗರ ಖಂಡ್ರೆ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಸಂಸದ ಸಾಗರ್ ಖಂಡ್ರೆ ಅವರು ಶ್ರೀ ಕೃಷ್ಣ ಅಪಾರ್ಟ್ಮೆಂಟ್ ನಂಬರ್ 103, ಬ್ಲಾಕ್ -01 ನಿವಾಸದಲ್ಲಿ ವಾಸವಾಗಿದ್ದಾರೆ. ಈ ಮನೆಯನ್ನು ಪೂರ್ವಾನುಮತಿಯೊಂದಿಗೆ ನವೀಕರಣ ಮಾಡಲಾಗುತ್ತಿದೆ. ಮೆಟ್ಟಿಲುಗಳಿಗಾಗಿ ವೈರ್ ಎಳೆಯಲಾಗಿದ್ದು, ಏಪ್ರಿಲ್ 2ರಂದು ಸಂಜೆ ಕಾರ್ಮಿಕರು ಕೆಲಸ ಮಾಡುವಾಗ ಅಪಾರ್ಟ್ಮೆಂಟ್ ಮ್ಯಾನೇಜರ್ ಚಂದ್ರಕುಮಾರ್ ಎಂಬುವರು ಕಾರ್ಮಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿ ಬೈದಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.
ಮನೆಯ ಮಾಲೀಕ ಸಾಗರ್ ಖಂಡ್ರೆ ಅವರಿಗೆ ಅಥವಾ ಅವರ ಸಹಾಯಕರಿಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಸಚಿವ ಈಶ್ವರ ಖಂಡ್ರೆ ಅವರ ಆಪ್ತ ಸಹಾಯಕ ಕರೆ ಮಾಡಿ ವಿಚಾರಿಸಿದಾಗ ಕೃಷ್ಣ ಅಪಾರ್ಟ್ಮೆಂಟ್ ಸೆಕ್ರೆಟರಿ ಆದೇಶದಂತೆ ವಿದ್ಯುತ್ ಕಡಿತಗೊಳಿಸಿರುವುದಾಗಿ ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.