ನಿಮ್ಮ ಕಸ ಕ್ಲೀನ್ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ: ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಎಲ್ಲಾ ಅಕ್ರಮ, ಅನ್ಯಾಯ ಮಾಡಿ ಎಲ್ಲೆಂದರಲ್ಲಿ ಕಸ ಸೃಷ್ಟಿ ಮಾಡಿದೆ. ಅದನ್ನು ಎತ್ತುವ, ಆ ಮೂಲಕ ಜನರನ್ನು ರಕ್ಷಣೆ ಮಾಡುವ ಟೆಂಡರ್ ತೆಗೆದುಕೊಂಡಿದ್ದೇನೆ. ಅದೇ ನಿಮ್ಮ ಇತಿಶ್ರೀ ಹಾಡಲಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಅಮಿ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಈ ಸರ್ಕಾರದ ಅಕ್ರಮಗಳು, ದರೋಡೆಗಳು ಮಿತಿಮೀರಿವೆ. ವಿಧಾನಸೌಧದ ಮೂರನೇ ಮಹಡಿಯಲ್ಲಿ ಘಜ್ನಿ ಮಹಮ್ಮದ್, ಘೋರಿ ಮಹಮ್ಮದ್ ಹಾಗೂ ಮಲ್ಲಿಕ್ ಖಫೂರ ಇದ್ದಾರೆ. ಅವರನ್ನು ನಾಚುವ ರೀತಿಯಲ್ಲಿ ಕೊಳ್ಳೆ ಹೊಡೆಯುತ್ತಿದ್ದಾರೆ. ಹನಿಟ್ರ್ಯಾಪ್, ಸುಪಾರಿ ಕೊಲೆ ಬಗ್ಗೆ ಚರ್ಚೆ ಆಗುತ್ತಿದೆ. ಎಂತಹ ಪರಿಸ್ಥಿತಿಗೆ ಬಂದಿದ್ದಾರೆ ಇವರು ಎಂದು ಬೇಸರ ವ್ಯಕ್ತಪಡಿಸಿದರು.

40 ವರ್ಷಗಳ ಹಿಂದೆಯೇ ನಾನು ಬಿಡದಿಯಲ್ಲಿ ಭೂಮಿ ಖರೀದಿ ಮಾಡಿದ್ದೆ. ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡು ರಾಜ್ಯದಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕೈದು ಜೆಸಿಬಿ , 25ರಿಂದ 30 ಅಧಿಕಾರಿಗಳು, ಪೊಲೀಸರು ಬಂದು ನನ್ನ ಭೂಮಿಯನ್ನು ಅಳತೆ ಮಾಡುತ್ತಾರೆ. ತೆರವಿನ ಹೈಡ್ರಾಮಾ ಮಾಡುತ್ತಾರೆ. ಕುಮಾರಸ್ವಾಮಿ ಬೆಂಬಲಿಗರು ದಾಳಿ ಮಾಡುತ್ತಾರೆ ಎಂದು ಪೊಲೀಸರನ್ನು ಕರೆದುಕೊಂಡು ಬಂದಿದ್ದರು. ರಾಜಕೀಯ ಸೇಡು ಸಾಧಿಸುತ್ತಿದ್ದರೆ. ಎಷ್ಟು ಬೇಕೋ ಅಷ್ಟು ಸಾಧಿಸಲಿ, ಅದಕ್ಕೆ ಉತ್ತರ ಕೊಡುವ ಸಮಯ ಬರುತ್ತದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಮಾಜಿ ಪ್ರಧಾನಿ ಮಗ, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೆ. ನಾನು ನಾಲ್ಕು ಎಕರೆ ಜಮೀನನ್ನ ಒತ್ತುವರಿ ಮಾಡಿಕೊಳ್ಳುಬೇಕಾ? 70 ಎಕರೆ ಒತ್ತುವರಿ ಎಂದು ಯಾರೋ ಸಮಾಜ ಪರಿವರ್ತನೆ ಮಾಡುವ ವ್ಯಕ್ತಿ ಹೇಳಿದ್ದಾನೆ. ಬಂದು ತೋರಿಸಲಿ. ನಾನು ಅನುಭವದಲ್ಲಿ.ಇರುವ ಭೂಮಿಯೇ 40 ರಿಂದ 42 ಎಕರೆ. ಅತಿಕ್ರಮಣ ಮಾಡಿಕೊಂಡಿದ್ದರೆ ದಾಖಲೆ ಬಿಡುಗಡೆ ಮಾಡಲಿ. ಈ ಸರ್ಕಾರದಲ್ಲಿರುವವರು ನಾನು ಅಪರಾಧಿ ಎಂದು ಅಪಪ್ರಚಾರ ಮಾಡುವುದಕ್ಕೆ ಹೊರಟ್ಟಿದ್ದಾರೆ. ಇದಕ್ಕೆಲ್ಲ ಕುಮಾರಸ್ವಾಮಿ ಹೆದರಲ್ಲ. ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು.

ನಾನು ಯಾವುದೇ ರೀತಿಯ ಒತ್ತುವರಿ ಮಾಡಿಲ್ಲ. ನನ್ನ ವ್ಯವಹಾರ ಕಾನೂನುದ್ಧವಾಗಿ ಆಗಿದೆ. ದಾಖಲೆಗಳ ಮುಖಾಂತರ ಕೆಲವು ತೀರ್ಮಾನಗಳು ಆಗಿವೆ. ಈ ವಿಚಾರದಲ್ಲಿ ಕೋರ್ಟ್ ಅನ್ನೂ ಮಿಸ್ ಲೀಡ್ ಮಾಡುವ ಕೆಲಸ ಆಗಿದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಕೇಸ್ ಹದಿನೇಳು ವರ್ಷಗಳಿಂದ ನಡೆಯುತ್ತಿದೆ. ತಪ್ಪು ಮಾಡಿದ್ದಿದ್ದರೆ, ಇಷ್ಟು ವರ್ಷಗಳ ಕಾಲ ಬೇಕಿತ್ತಾ? ಕೇವಲ ನನ್ನ ಮೇಲೆ ರಾಜಕೀಯ ಹಗೆತನ ಸಾಧಿಸಲು ಇದನ್ನೆಲ್ಲ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಮುಡಾ ಕೇಸ್ ನಲ್ಲಿ ಎಷ್ಟು ಸ್ಪೀಡ್ ಆಗಿ ತನಿಖೆ ಮಾಡಿದರು. ನಾನು ಎರಡನೇ ಸಲ ಮುಖ್ಯಮಂತ್ರಿ ಆಗಿದ್ದಾಗ ಸಾಯಿವೆಂಕಟೇಶ್ವರ ಕೇಸ್ ಮುಚ್ಚಿ ಹಾಕಲು ಪ್ರಯತ್ನ ಮಾಡಿದ್ದೀನಾ? ಯಾರಾದ್ರೂ ಅಧಿಕಾರಿಗೆ ಕರೆ ಮಾಡಿ ಬೆದರಿಸಿದ್ದೀನಾ? ಇದಕ್ಕೆಲ್ಲ ಉತ್ತರ ಕೊಡದೇ ನಾನು ಬಿಡುವುದಿಲ್ಲ ಎಂದು ಅವರು ಗುಡುಗಿದರು.

ಮುಸ್ಲಿಮರಿಗೆ ಗುತ್ತಿಗೆ ಮೀಸಲು ಸೇರಿದಂತೆ ಯಾರು ಯಾರಿಗೆ ಗುತ್ತಿಗೆ ಮೀಸಲು ನೀಡಿದ್ದಾರೋ, ಅದರಿಂದ ಅವರು ಎಷ್ಟು ಆರ್ಥಿಕವಾಗಿ ಸಬಲರಾಗಿದ್ದಾರೆ ಎಂಬ ಜನರಿಗೆ ಮಾಹಿತಿ. ಆ ಬಗ್ಗೆ ಶ್ವೇತಪತ್ರ ಹೊರಡಿಸಿ ಎಂದು ಕೇಂದ್ರ ಸಚಿವರು ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಮುಸ್ಲಿಂ ಸಮುದಾಯಕ್ಕೆ ಗುತ್ತಿಗೆಯಲ್ಲಿ ನಾಲ್ಕು ಪರ್ಸೆಂಟ್ ಮೀಸಲಾತಿ ಕೊಡಲು ಹೊರಟಿದ್ದೀರಲ್ಲ. ಕ್ರೆಡೆಲ್, ನಿರ್ಮಿತಿ ಕೇಂದ್ರ ಎಲ್ಲಾ ಯಾಕೆ ಇಟ್ಟುಕೊಂಡಿದ್ದೀರಿ? ಜನಗಳಿಗೆ ಈ ಮಟ್ಟಕ್ಕೆ ಟೋಪಿ ಹಾಕಲು ಹೊರಟಿದ್ದೀರಾ? ಇಲ್ಲಾ ಸಾಬರನ್ನು ಉದ್ದಾರ ಮಾಡಲು ಹೊರಟಿದ್ದೀರಾ? ಈ ವಿಚಾರದಲ್ಲಿ ಬಿಜೆಪಿ ಸ್ನೇಹಿತರಿಗೆ ಕಾಂಗ್ರೆಸ್ ನ ಟೆಕ್ನಿಕಲ್ ತಪ್ಪುಗಳನ್ನು ಹುಡುಕಿ ಎಂದು ಸಚಿವರು ಸಲಹೆ ಕೊಟ್ಟರು.

ಬೆಂಗಳೂರಿನ 198 ವಾರ್ಡ್ ಗಳಲ್ಲಿಯೂ ನಮಗೆ ಶಕ್ತಿ ಇಲ್ಲ. ಆದರೆ ಇರುವ ಅಲ್ಪ ಸ್ವಲ್ಪ ಕಾರ್ಯಕರ್ತರ ಶಕ್ತಿ ಬಳಸಿಕೊಂಡು ಅವರನ್ನು ಸಂಘಟಿಸಿ ಪಕ್ಷವನ್ನು ಮುನ್ನಡೆಸುತ್ತೇವೆ. ಬೆಂಗಳೂರಿನಲ್ಲಿ ಆಗುತ್ತಿರುವ ಅನಾಹುತ, ಮಾಡಬೇಕಾದ ಕೆಲಸಗಳ ಬಗ್ಗೆ ಜನಾಂದೋಲನ ಮಾಡುತ್ತೇವೆ. ಜನಗಳನ್ನು ಎಚ್ಚರಿಸುವ ಕೆಲಸ ಮಾಡುತ್ತೇವೆ ಎಂದು ಕೇಂದ್ರ ಸಚಿವರು ಘೋಷಣೆ ಮಾಡಿದರು.

ಪಕ್ಷ ಸಂಘಟನೆ ಮಾಡಬೇಕು ಎನ್ನುವುದು ಬೇರೆ. ರಾಜಧಾನಿಯನ್ನು ಕಾಂಗ್ರೆಸ್ ಸರಕಾರ ಹೇಗೆಲ್ಲ ಸುಲಿಗೆ ಮಾಡುತ್ತಿದೆ ಎಂಬುದನ್ನು ಜನರಿಗೆ ಹೇಳಬೇಕು. ದೇಶದ ಎಲ್ಲಾ ಭಾಗದ ಜನರೂ ನಗರದಲ್ಲಿ ಆಶ್ರಯ ಪಡೆದು ಬದುಕುತ್ತಿದ್ದಾರೆ. ಹೀಗಾಗಿ ಕನ್ನಡ, ಇಂಗ್ಲಿಷ್ ಸೇರಿ ಎಲ್ಲಾ ಭಾಷೆಗಳಲ್ಲಿ ಕರಪತ್ರ ಮುದ್ರಿಸಿ ಜಾಗೃತಿ ಮೂಡಿಸುತ್ತಿವೆ. ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುತ್ತೇವೆ ಎಂದು ಅವರು ಹೇಳಿದರು.

ಜೆಡಿಎಸ್ – ಬಿಜೆಪಿ ಬಿನ್ನಾಭಿಪ್ರಾಯ ವಿಚಾರಕ್ಕೆ ಮಾತನಾಡಿದ ಕೇಂದ್ರ ಸಚಿವರು, ಬಿಜೆಪಿ ಜೊತೆ ಮೈತ್ರಿ ಉತ್ತಮವಾಗಿದೆ. ಯಾವ ಹೊಂದಾಣಿಕೆಯ ಕೊರತೆಯು ಇಲ್ಲ. ಸಮನ್ವಯ ಸಮಿತಿ ರಚನೆ ಬಗ್ಗೆ ಸುರೇಶ್ ಬಾಬು ಅವರ ಅಭಿಪ್ರಾಯ ಹೇಳಿದ್ದಾರೆ. ನಿಖಿಲ್ ಕೂಡ ಮಾತನಾಡಿದ್ದಾರೆ. ನಾನು ಈ ಬಗ್ಗೆ ಬಿಜೆಪಿ ಎಲ್ಲಾ ನಾಯಕರ ಜತೆ ಮಾತನಾಡುತ್ತೇನೆ. ಅಲ್ಲದೆ, ನಮ್ಮಲ್ಲಿ ವಿಶ್ವಾಸದ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶಕ್ಕೆ ಉತ್ತಮ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read