ಆಕಾಶದೆತ್ತರಕ್ಕೆ ನಿಂತಿರುವ ಬುರ್ಜ್ ಖಲೀಫಾ ಶ್ರೀಮಂತರ ಸ್ವರ್ಗ. ಇಲ್ಲಿ ಒಂದು ಪುಟ್ಟ ಅಪಾರ್ಟ್‌ಮೆಂಟ್ ಬಾಡಿಗೆ ಕೇಳಿದರೂ ಬೆಚ್ಚಿ ಬೀಳುವಂತಿದೆ. ಆದರೆ ಭಾರತೀಯ ಉದ್ಯಮಿಯೊಬ್ಬರು ಇದೇ ಗಗನಚುಂಬಿಯಲ್ಲಿ ಬರೋಬ್ಬರಿ 22 ಐಷಾರಾಮಿ ಮನೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ !
ಕೇರಳದ ಬಡ ಕುಟುಂಬದಲ್ಲಿ ಜನಿಸಿದ ಜಾರ್ಜ್ ವಿ. ನೆರೆಯಂಪರಂಬಿಲ್ ಎಂಬ ಈ ಉದ್ಯಮಿ, ಹತ್ತಿ ಬೀಜದ ತ್ಯಾಜ್ಯದಿಂದ ಅಂಟು ತಯಾರಿಸಿ ವ್ಯಾಪಾರ ಆರಂಭಿಸಿ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. 1976ರಲ್ಲಿ ಶಾರ್ಜಾಗೆ ತೆರಳಿದ ಇವರು, ಅಲ್ಲಿನ ಹವಾಮಾನಕ್ಕೆ ಹೊಂದಿಕೆಯಾಗುವ ಹವಾನಿಯಂತ್ರಣ ವ್ಯವಹಾರದ ಭಾರಿ ಅವಕಾಶವನ್ನು ಮನಗಂಡರು. ಇದು ಅವರ ಅದೃಷ್ಟವನ್ನೇ ಬದಲಾಯಿಸಿತು. ಇಂದು ಅವರ ಜಿಯೋ ಗ್ರೂಪ್ ಆಫ್ ಕಂಪನೀಸ್ ಮಧ್ಯಪ್ರಾಚ್ಯದಲ್ಲಿ ದೊಡ್ಡ ಹೆಸರು.
ಕುತೂಹಲದ ಸಂಗತಿಯೆಂದರೆ, ಸಂಬಂಧಿಯೊಬ್ಬರು “ನಿನ್ನಿಂದ ಈ ಕಟ್ಟಡದ ಒಳಗೆ ಹೋಗಲೂ ಸಾಧ್ಯವಿಲ್ಲ” ಎಂದು ಸವಾಲು ಹಾಕಿದ್ದೇ ಜಾರ್ಜ್ ಅವರನ್ನು ಬುರ್ಜ್ ಖಲೀಫಾದಲ್ಲಿ ಆಸ್ತಿ ಖರೀದಿಸುವಂತೆ ಮಾಡಿತು. ಸವಾಲನ್ನು ಸ್ವೀಕರಿಸಿದ ಅವರು ಮೊದಲು ಒಂದು ಫ್ಲ್ಯಾಟ್ ಬಾಡಿಗೆಗೆ ಪಡೆದರು. ನಂತರ ಹಂತ ಹಂತವಾಗಿ 22 ಐಷಾರಾಮಿ ಫ್ಲ್ಯಾಟ್‌ಗಳನ್ನು ಖರೀದಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು.
ಬುರ್ಜ್ ಖಲೀಫಾದ 900 ಅಪಾರ್ಟ್‌ಮೆಂಟ್‌ಗಳಲ್ಲಿ ಇಷ್ಟೊಂದು ಫ್ಲ್ಯಾಟ್‌ಗಳನ್ನು ಹೊಂದಿರುವ ಏಕೈಕ ವ್ಯಕ್ತಿ ಬಹುಶಃ ಇವರೇ. ಸುಮಾರು 4800 ಕೋಟಿ ರೂಪಾಯಿಗಳ ಆಸ್ತಿಯ ಒಡೆಯರಾಗಿರುವ ಜಾರ್ಜ್ ಇಂದು ಬುರ್ಜ್ ಖಲೀಫಾದ ತಮ್ಮ ಐಷಾರಾಮಿ ನಿವಾಸದಲ್ಲಿ ರಾಜನಂತೆ ಬಾಳುತ್ತಿದ್ದಾರೆ. ಅವರ ಫ್ಲ್ಯಾಟ್‌ಗಳ ಒಳಾಂಗಣ ಚಿನ್ನದಿಂದ ಅಲಂಕೃತವಾಗಿದೆ ಎಂಬ ಮಾತುಗಳಿವೆ. ಬಡತನದಲ್ಲಿ ಬೆಳೆದ ವ್ಯಕ್ತಿಯೊಬ್ಬರು ವಿಶ್ವದ ಅತಿ ಎತ್ತರದ ಕಟ್ಟಡದಲ್ಲಿ ಇಷ್ಟೊಂದು ಆಸ್ತಿ ಹೊಂದಿರುವುದು ನಿಜಕ್ಕೂ ರೋಚಕ ಮತ್ತು ಸ್ಫೂರ್ತಿದಾಯಕ ಕಥೆ.