ಜೈಲಿನಲ್ಲಿ ದುಡಿದ ಹಣದಿಂದ ಕೈದಿಗೆ ʼಬಿಡುಗಡೆಯ ಭಾಗ್ಯʼ

ರಾಯಚೂರು: ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬರು ಜೈಲಿನಲ್ಲಿ ದುಡಿದ ಹಣದಿಂದಲೇ ಬಿಡುಗಡೆ ಹೊಂದಿದ್ದಾರೆ. ರಾಯಚೂರು ಜಿಲ್ಲೆಯ ಜಂತಾಪುರ ಗ್ರಾಮದ ದುರ್ಗಪ್ಪ ಎಂಬುವವರೇ ಈ ಅಪರೂಪದ ವ್ಯಕ್ತಿ.

2012 ರಲ್ಲಿ ಪತ್ನಿಯನ್ನು ಕೊಲೆ ಮಾಡಿದ ಆರೋಪಕ್ಕಾಗಿ ದುರ್ಗಪ್ಪನನ್ನು 2013 ರಲ್ಲಿ ರಾಯಚೂರು ಸೆಷನ್ಸ್ ಕೋರ್ಟ್ ಜೀವಾವಧಿ ಶಿಕ್ಷೆಗೆ ಗುರಿಪಡಿಸಿ ಮತ್ತು 1.1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ದಂಡ ಪಾವತಿಸಲು ವಿಫಲವಾದರೆ, ಹೆಚ್ಚುವರಿಯಾಗಿ 18 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಬೇಕಿತ್ತು.

12 ವರ್ಷಗಳ ಕಾಲ ಜೈಲಿನಲ್ಲಿ ಕಳೆದ ನಂತರ, 68 ವರ್ಷದ ದುರ್ಗಪ್ಪನಿಗೆ ಬಿಡುಗಡೆಯ ಭಾಗ್ಯ ಒಲಿಯಿತು, ಆದರೆ 1.1 ಲಕ್ಷ ರೂಪಾಯಿ ದಂಡದೊಂದಿಗೆ. ಕಳೆದ ಗುರುವಾರ ಕಲಬುರಗಿ ಕೇಂದ್ರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ʼಟೈಮ್ಸ್ ಆಫ್ ಇಂಡಿಯಾʼ ವರದಿಯ ಪ್ರಕಾರ, ದುರ್ಗಪ್ಪ ಉತ್ತಮ ನಡವಳಿಕೆಯಿಂದಾಗಿ ನವೆಂಬರ್ 2024 ರಲ್ಲಿಯೇ ಬಿಡುಗಡೆಗೆ ಅರ್ಹರಾಗಿದ್ದರು, ಆದರೆ ದಂಡ ಪಾವತಿಸದ ಕಾರಣ ಬಿಡುಗಡೆ ವಿಳಂಬವಾಗಿತ್ತು. ಜೈಲಿನ ಹೊರಗೆ ಕುಟುಂಬ ಅಥವಾ ಆರ್ಥಿಕ ಸಂಪನ್ಮೂಲಗಳಿಲ್ಲದ ಕಾರಣ, ದುರ್ಗಪ್ಪನ ಪರಿಸ್ಥಿತಿ ಹತಾಶವಾಗಿತ್ತು.

ದುರ್ಗಪ್ಪ ವರ್ಷಗಳಿಂದ ಜೈಲಿನಲ್ಲಿ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಆರಂಭದಲ್ಲಿ, ಜೈಲು ಕೂಲಿ ಅತ್ಯಲ್ಪವಾಗಿತ್ತು, ದಿನಕ್ಕೆ ಕೇವಲ 100 ರಿಂದ 150 ರೂಪಾಯಿಗಳಾಗಿದ್ದು ಬಳಿಕ, ಕರ್ನಾಟಕ ಸರ್ಕಾರ ದೈನಂದಿನ ಕೂಲಿಯನ್ನು 524 ರೂಪಾಯಿಗಳಿಗೆ ಹೆಚ್ಚಿಸಿದ ನಂತರ, ಅವರ ಗಳಿಕೆ ಬೆಳೆಯಿತು. ದುರ್ಗಪ್ಪ ಜೈಲಿನ ಖಾತೆಯಲ್ಲಿ ಸುಮಾರು 2.8 ಲಕ್ಷ ರೂಪಾಯಿಗಳನ್ನು ಹೊಂದಿದ್ದರು.

ಈ ವಿಷಯವನ್ನು ಜೈಲು ಅಧಿಕಾರಿಗಳು ತಿಳಿದುಕೊಂಡಾಗ, ಕಲಬುರಗಿ ಜೈಲಿನ ಮುಖ್ಯ ಅಧೀಕ್ಷಕ ಆರ್. ಅನಿತಾ ಸಹಾಯ ಮಾಡಲು ಮುಂದಾಗಿದ್ದು, ಅವರು ದುರ್ಗಪ್ಪನನ್ನು ಕಲಬುರಗಿಯ ಎಸ್‌ಬಿಐ ಶಾಖೆಗೆ ಕರೆದೊಯ್ದು 1.1 ಲಕ್ಷ ರೂಪಾಯಿಗಳನ್ನು ಹಿಂತೆಗೆದುಕೊಳ್ಳಲು ಸಹಾಯ ಮಾಡಿದ್ದರು. ಇಬ್ಬರು ಜೈಲು ಸಿಬ್ಬಂದಿಯೊಂದಿಗೆ, ದುರ್ಗಪ್ಪ ಗುರುವಾರ ರಾಯಚೂರು ಸೆಷನ್ಸ್ ಕೋರ್ಟ್‌ಗೆ ತೆರಳಿ ದಂಡವನ್ನು ಪಾವತಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read