
ಬನಸ್ಕಂತ(ಗುಜರಾತ್): ಗುಜರಾತ್‌ನ ಬನಸ್ಕಂತ ಜಿಲ್ಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರೀ ಸ್ಫೋಟದ ನಂತರ ಸಂಭವಿಸಿದ ಬೆಂಕಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ. ಆರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪಾಲನ್ಪುರ ದೀಸಾ ಪಟ್ಟಣದ ಬಳಿಯ ಕೈಗಾರಿಕಾ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟವು ಎಷ್ಟು ಪ್ರಬಲವಾಗಿತ್ತೆಂದರೆ ಅದು ಗೋದಾಮನ್ನು ಸಂಪೂರ್ಣ ಹಾನಿ ಮಾಡಿದೆ. ಸ್ಪೋಟದ ಪರಿಣಾಮ ಕಾರ್ಮಿಕರ ದೇಹದ ಭಾಗಗಳು 200-300 ಮೀಟರ್ ದೂರದಲ್ಲಿ ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಮಿಹಿರ್ ಪಟೇಲ್ ಅವರ ಪ್ರಕಾರ, ಮೃತರೆಲ್ಲರೂ ಮಧ್ಯಪ್ರದೇಶದ ಹಾರ್ದಾ ಮತ್ತು ದೇವಾಸ್ ಜಿಲ್ಲೆಗಳವರು. ಮೃತ 21 ಜನರಲ್ಲಿ ಐವರು ಮೂರು ರಿಂದ 12 ವರ್ಷದೊಳಗಿನ ಮಕ್ಕಳು ಮತ್ತು ಐದು ಮಂದಿ ಮಹಿಳೆಯರು.
19 ಮೃತರ ಗುರುತು ಪತ್ತೆಯಾಗಿದ್ದು, ಉಳಿದ ಇಬ್ಬರನ್ನು ದೃಢೀಕರಿಸಲು ಡಿಎನ್ಎ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಅಕ್ರಮ ಪಟಾಕಿ ಸಂಗ್ರಹಣೆ ಮತ್ತು ತಯಾರಿಕೆ
ಬನಸ್ಕಂತ ಪೊಲೀಸ್ ಅಧೀಕ್ಷಕ ಅಕ್ಷಯರಾಜ್ ಮಕ್ವಾನಾ ಅವರು ದೀಪಕ್ ಟ್ರೇಡರ್ಸ್ ಎಂದು ಗುರುತಿಸಲಾದ ಗೋದಾಮು ತಂದೆ-ಮಗ ದೀಪಕ್ ಮೊಹ್ನಾನಿ ಮತ್ತು ಖುಬ್ಚಂದ್ ಮೊಹ್ನಾನಿ ಅವರ ಒಡೆತನದಲ್ಲಿದೆ ಎಂದು ಹೇಳಿದರು. ಮೊದಲ ನೋಟಕ್ಕೆ ಗೋದಾಮಿನಲ್ಲಿ ಅಕ್ರಮವಾಗಿ ಪಟಾಕಿಗಳನ್ನು ಸಂಗ್ರಹಿಸಲಾಗುತ್ತಿತ್ತು. ನಾವು ಎಫ್‌ಐಆರ್ ದಾಖಲಿಸಿದ್ದೇವೆ ಮತ್ತು ಐದು ತನಿಖಾ ತಂಡಗಳನ್ನು ರಚಿಸಿದ್ದೇವೆ. ಉಪ ಎಸ್‌ಪಿ ಮಟ್ಟದ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‌ಐಟಿ) ಅನ್ನು ಸಹ ರಚಿಸಲಾಗಿದೆ. ಕೆಲವು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.
ಪರಿಹಾರ ಘೋಷಣೆ
ಪ್ರಧಾನಿ ನರೇಂದ್ರ ಮೋದಿ ಅವರು ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿ, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ(PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್, ತಮ್ಮ ರಾಜ್ಯದ ಕಾರ್ಮಿಕರ ಸಾವು ತೀವ್ರ ದುಃಖಕರವಾಗಿದೆ ಎಂದು ಹೇಳಿದ್ದು, ಮೃತರ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಮತ್ತು ಗಾಯಾಳುಗಳಿಗೆ 50,000 ರೂ. ಪರಿಹಾರ ಘೋಷಿಸಿದ್ದಾರೆ. ಸಮನ್ವಯಕ್ಕಾಗಿ ಅವರು ಕ್ಯಾಬಿನೆಟ್ ಸಚಿವ ನಗರ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಅಧಿಕಾರಿಗಳ ತಂಡವನ್ನು ಬನಸ್ಕಂತಕ್ಕೆ ಕಳುಹಿಸಿದರು.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಮೃತರ ಕುಟುಂಬಗಳಿಗೆ ಹೆಚ್ಚುವರಿಯಾಗಿ 4 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50,000ರೂ. ಪರಿಹಾರ ಘೋಷಿಸಿದ್ದಾರೆ.