
ಬೆಂಗಳೂರು: ಕರ್ತವ್ಯಲೋಪ ಆರೋಪದ ಮೇರೆಗೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯ ಎಎಸ್ಐ ಗುಣಶೇಖರ್ ಹಾಗೂ ಮೂವರು ಕಾನ್ಸ್ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.
ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ 7 ದಿನ ಠಾಣೆಯಲ್ಲಿ ಇರಿಸಿಕೊಂಡು ವಿವಿಧೆಡೆ ಸುತ್ತಾಟ ನಡೆಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಎಎಸ್ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ.
ಕೇರಳದ ರಾಜೀವ್ ಕಾರ್ ಮಾರಾಟಕ್ಕೆ ಮುಂದಾಗಿದ್ದು, ಕಳವು ಮಾಡಿದ ಕಾರ್ ಮಾರಾಟ ಮಾಡುತ್ತಿರುವ ಆರೋಪದ ಮೇಲೆಗೆ ಪೊಲೀಸರು ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಸುಳ್ಳು ಹೇಳಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಆರೋಪಿಸಿ ರಾಜೀವ್ ಕುಟುಂಬದವರು ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿದ್ದರು.
ಆಯೋಗದ ಅಧಿಕಾರಿಗಳು ಠಾಣೆಯ ಮೇಲೆ ದಾಳಿ ಮಾಡಿದಾಗ ರಾಜೀವ್ ಅವರನ್ನು ಹಿಂಬದಿ ಬಾಗಿಲ ಮೂಲಕ ಪೊಲೀಸರು ಹೊರಗೆ ಕಳಿಸಿದ್ದರು. ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಕ್ರಮವಾಗಿ ಬಂಧಿಸಿರುವುದು ಪತ್ತೆಯಾಗಿತ್ತು.