ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಒಂದು ಘಟನೆ ವೈದ್ಯಕೀಯ ಲೋಕದಲ್ಲಿ ಆಘಾತ ಮೂಡಿಸಿದೆ. ಸಿಸೇರಿಯನ್ (ಶಸ್ತ್ರಚಿಕಿತ್ಸೆ) ಮೂಲಕ ಹೆರಿಗೆ ಮಾಡಿಸಿದ ವೈದ್ಯೆಯೊಬ್ಬರು ರಕ್ತದ ಕಲೆ ಒರೆಸಲು ಬಳಸಿದ ಹತ್ತಿಯ ಉಂಡೆಯನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟಿದ್ದಾರೆ.
ರಜನಿ ಶರ್ಮಾ ಎಂಬ ಮಹಿಳೆಯು 2018ರ ಜೂನ್ 30ರಂದು ಸಿರೋಹಿ ನರ್ಸಿಂಗ್ ಹೋಂನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಗ ಡಾ. ಶಿಖಾ ಜೈನ್ ಅವರು ಶಸ್ತ್ರಚಿಕಿತ್ಸೆ ನಡೆಸಿದ್ದರು.
ಶಸ್ತ್ರಚಿಕಿತ್ಸೆಯ ನಂತರ ರಜನಿ ಶರ್ಮಾ ಅವರಿಗೆ ಆಗಾಗ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿತ್ತು. ಪರಿಸ್ಥಿತಿ ತೀರ ಹದಗೆಟ್ಟಾಗ ಅವರು ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು.
ಆಗ, ಡಾ. ಶಿಖಾ ಜೈನ್, ನಿರ್ಲಕ್ಷ್ಯದಿಂದ ರಜನಿ ಶರ್ಮಾ ಅವರ ಹೊಟ್ಟೆಯಲ್ಲೇ ಹತ್ತಿಯುಂಡೆ ಬಿಟ್ಟಿದ್ದು ಗೊತ್ತಾಗಿದೆ. ಈ ಸಂಬಂಧ ರಜನಿ ಶರ್ಮಾ ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಆದೇಶ ಹೊರಡಿಸಿದೆ.
ನ್ಯಾಯಾಲಯದ ಆದೇಶದಂತೆ ವೈದ್ಯೆ ಡಾ. ಶಿಖಾ ಜೈನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.