
ಹೊಸಪೇಟೆ: ತಂದೆಯ ಸಾವಿನ ನೋವಿನಲ್ಲಿಯೂ ವಿದ್ಯಾರ್ಥಿಯೊಬ್ಬ SSLC ಪರೀಕ್ಷೆ ಬರೆದ ಮನಕಲಕುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ಟಿಬಿ ಡ್ಯಾಂ ಪ್ರದೇಶದ ವಿದ್ಯಾರ್ಥಿ ಹರಿಧರನ್ ಟಿಬಿ ಡ್ಯಾಂ ನ ಸಂತ ಜೋಸೆಫ್ ಶಾಲೆಯಲ್ಲಿ ಓದುತ್ತಿದ್ದು, ಅವರ ತಂದೆ ಸೆಲ್ವ ಕುಟ್ಟಿ ಶುಕ್ರವಾರ ಅನಾರೋಗ್ಯದಿಂದ ತಮಿಳುನಾಡಿನಲ್ಲಿ ನಿಧನರಾಗಿದ್ದಾರೆ. ಶನಿವಾರ ತಂದೆಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಇದೇ ವೇಳೆ ಹೊಸಪೇಟೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಹರಿಧರನ್ ಕಣ್ಣೀರಿಡುತ್ತಲೇ ಸಮಾಜ ವಿಜ್ಞಾನ ಪರೀಕ್ಷೆ ಬರೆದಿದ್ದಾನೆ.
ತಂದೆಯ ಸಾವಿನ ನೋವಿನಲ್ಲೂ ಪರೀಕ್ಷೆ ಬರೆಯಲು ಅಳುತ್ತಾ ಬಂದ ವಿದ್ಯಾರ್ಥಿ ಹರಿಧರನ್ ಕಂಡ ಶಿಕ್ಷಕರು, ಸಹಪಾಠಿಗಳು ಮರುಗಿದ್ದಾರೆ. ಅತ್ತ ತಂದೆ ಅಂತ್ಯಕ್ರಿಯೆ ನಡೆದರೆ, ಇತ್ತ ಮಗ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ.