ಬೆಂಗಳೂರಿನಲ್ಲಿ ನಡೆದ ಭಾರತೀಯ ಗ್ರ್ಯಾಂಡ್ ಪ್ರಿಕ್ಸ್ (ಐಜಿಪಿ) ಅಥ್ಲೆಟಿಕ್ಸ್ ಕೂಟದಲ್ಲಿ ಪಂಜಾಬ್‌ನ ಗುರಿಂದರ್ವಿರ್ ಸಿಂಗ್ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ. ಗುರುವಾರ ನಡೆದ 100 ಮೀಟರ್ ಓಟದಲ್ಲಿ 10.20 ಸೆಕೆಂಡುಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದ್ದಾರೆ.
ಈ ಹಿಂದೆ 2023 ರಲ್ಲಿ ಬೆಂಗಳೂರಿನಲ್ಲಿ ಮಣಿಕಾಂತ ಹೋಬ್ಲಿದಾರ್ 10.23 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆ ಬರೆದಿದ್ದರು. ಆದರೆ, ಗುರುವಾರ ಗುರಿಂದರ್ವಿರ್ ಸಿಂಗ್ ತಮ್ಮ ಮಿಂಚಿನ ಓಟದ ಮೂಲಕ ಆ ದಾಖಲೆಯನ್ನು ಮುರಿದಿದ್ದಾರೆ.
ದಾಖಲೆ ಮುರಿದ ನಂತರ ಮಾತನಾಡಿದ ಗುರಿಂದರ್ವಿರ್ ಸಿಂಗ್, “ಹವಾಮಾನ ಚೆನ್ನಾಗಿತ್ತು, ಆದರೆ ಟ್ರ್ಯಾಕ್ ಸ್ವಲ್ಪ ಜಾರುತ್ತಿತ್ತು. ಆದರೂ, ಉತ್ತಮ ಸಮಯ ದಾಖಲಿಸಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ” ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಗುರುವಾರದ ಕೂಟದಲ್ಲಿ ಮಣಿಕಾಂತ ಹೋಬ್ಲಿದಾರ್ 10.22 ಸೆಕೆಂಡುಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಪಡೆದರು. ಅಮಲನ್ ಬೊರ್ಗೊಹೈನ್ ಮೂರನೇ ಸ್ಥಾನ ಪಡೆದರು. ಮಹಿಳೆಯರ 100 ಮೀಟರ್ ಓಟದಲ್ಲಿ ತೆಲಂಗಾಣದ ನಿತ್ಯ ಗಾಂಧೆ 11.41 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಕರ್ನಾಟಕದ ಸ್ನೇಹಾ ಎಸ್.ಎಸ್ ಎರಡನೇ ಸ್ಥಾನ ಮತ್ತು ತಮಿಳುನಾಡಿನ ಅಭಿನಯ ರಾಜರಾಜನ್ ಮೂರನೇ ಸ್ಥಾನ ಪಡೆದರು.
ನಂತರ ನಡೆದ 200 ಮೀಟರ್ ಓಟದಲ್ಲಿ ನಿತ್ಯ ಗಾಂಧೆ, ಜ್ಯೋತಿ ಯರ್ರಾಜಿಯನ್ನು ಸೋಲಿಸಿ ಡಬಲ್ ಸಾಧನೆ ಮಾಡಿದರು. 200 ಮೀಟರ್ ಓಟದಲ್ಲಿ ಅಮಲನ್ ಬೊರ್ಗೊಹೈನ್ ಮೊದಲ ಸ್ಥಾನ ಪಡೆದರು.