
ಬೆಂಗಳೂರು: ಕೇಂದ್ರ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಲ್ಲಿಸಲಾಗಿದ್ದ ಕಡತಗಳನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಗೆ ಲೋಕಾಯುಕ್ತ ಎಸ್ಐಟಿ ಹಾಗೂ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಲು ಪ್ರತ್ಯೇಕವಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಲೋಕಾಯುಕ್ತ ಪೊಲೀಸರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಈ ಕುರಿತಾದ ಸಾವಿರಾರು ಪುಟಗಳ ಆರೋಪ ಪಟ್ಟಿಯನ್ನು ಕನ್ನಡದಿಂದ ಇಂಗ್ಲೀಷ್ ಗೆ ಅನುವಾದಿಸಿ ತನಿಖಾಧಿಕಾರಿ ರಾಜ್ಯಪಾಲರಿಗೆ ಸಲ್ಲಿಸಿದ್ದರು. ಆದರೆ, ಕೆಲವು ತಾಂತ್ರಿಕ ಕಾರಣ ಮುಂದಿಟ್ಟು, ಅವುಗಳಿಗೆ ಸ್ಪಷ್ಟನೆ ಕೋರಿ ಲೋಕಾಯುಕ್ತ ಪೊಲೀಸರು ಮತ್ತು ಎಸ್ಐಟಿ ಅಧಿಕಾರಿಗಳಿಗೆ ರಾಜ್ಯಪಾಲರು ಆರೋಪ ಪಟ್ಟಿಯ ಕಡತ ಮರಳಿಸಿದ್ದಾರೆ ಎಂದು ಹೇಳಲಾಗಿದೆ.