ಪಾಕಿಸ್ತಾನದ ಕರಾಚಿಯ ಜೈಲಿನಲ್ಲಿ ಭಾರತೀಯ ಮೀನುಗಾರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಮಾಲಿರ್ ಜೈಲಿನ ಬ್ಯಾರಕ್ ವಾಶ್‌ರೂಂನಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಗೌರವ್ ರಾಮ್ ಆನಂದ್ (52) ಎಂಬ ಮೀನುಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಜೈಲು ಆಡಳಿತ ಮಂಡಳಿ ತಿಳಿಸಿದೆ.
ಡಾಕ್ಸ್ ಪೊಲೀಸರು 2022ರ ಫೆಬ್ರವರಿಯಲ್ಲಿ ಗೌರವ್‌ರನ್ನು ಬಂಧಿಸಿ ಮಾಲಿರ್ ಜೈಲಿಗೆ ಕಳುಹಿಸಿದ್ದರು. ಕಳೆದ ರಾತ್ರಿ ಜೈಲಿನ ವೈದ್ಯರು ಪರಿಶೀಲಿಸಿದ ನಂತರ ಬೆಳಿಗ್ಗೆ 2:20ಕ್ಕೆ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದರು. ನಂತರ ಮೃತದೇಹವನ್ನು ಕಾನೂನು ಪ್ರಕ್ರಿಯೆಗಳಿಗಾಗಿ ಜಿನ್ನಾ ಆಸ್ಪತ್ರೆಗೆ ಮತ್ತು ನಂತರ ಸೋಹ್ರಾಬ್ ಗೋಥ್‌ನಲ್ಲಿರುವ ಎಧಿ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು.
ಕಳೆದ ತಿಂಗಳು, ಫೆಬ್ರವರಿ 22 ರಂದು ಮಾಲಿರ್ ಜೈಲಿನಿಂದ ಬಿಡುಗಡೆಯಾದ 22 ಭಾರತೀಯ ಮೀನುಗಾರರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಪಾಕಿಸ್ತಾನದ ಪ್ರಾದೇಶಿಕ ಜಲಪ್ರದೇಶವನ್ನು ಆಕಸ್ಮಿಕವಾಗಿ ಪ್ರವೇಶಿಸಿದ ಆರೋಪದಲ್ಲಿ ಅವರಿಗೆ ಶಿಕ್ಷೆಯಾಗಿತ್ತು.