
ಬೆಂಗಳೂರು: ಅಗತ್ಯ ವಸ್ತು ಮತ್ತು ಸೇವೆಗಳ ದರ ಹೆಚ್ಚಳದಿಂದ ಕಂಗಾಲಾಗಿರುವ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ.
ರಾಜ್ಯದಲ್ಲಿ ಏಪ್ರಿಲ್ 1ರಿಂದ ಟೋಲ್ ದರ ಶೇಕಡ 3ರಿಂದ ಗರಿಷ್ಠ ಶೇಕಡ 5ರಷ್ಟು ಏರಿಕೆಯಾಗಲಿದ್ದು, ನೇರವಾಗಿ ಇದರ ಬಿಸಿ ಸಾರ್ವಜನಿಕರಿಗೆ ತಟ್ಟಲಿದೆ. ಬೆಲೆ ಏರಿಕೆ ಹಾಗೂ ವಾರ್ಷಿಕ ಹಣದುಬ್ಬರ ಆಧರಿಸಿ ಟೋಲ್ ದರ ಹೆಚ್ಚಿಸಲಾಗಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರ ಜಾರಿಯಾಗಲಿದೆ.
ಟೋಲ್ ಗುತ್ತಿಗೆ ಅವಧಿ ಆಧರಿಸಿ ದರಗಳು ಬದಲಾವಣೆಯಾಗಲಿದ್ದು, ಕನಿಷ್ಠ ಶೇಕಡ 3ರಷ್ಟು, ಗರಿಷ್ಠ ಶೇಕಡ 5ರಷ್ಟು ಹೆಚ್ಚಳವಾಗಲಿದೆ. ಈ ಹೆಚ್ಚುವರಿ ಶುಲ್ಕವನ್ನು ಗ್ರಾಹಕರಿಗೆ ವರ್ಗಾಯಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಹೇಳಿದೆ. ರಾಷ್ಟ್ರೀಯ ಹೆದ್ದಾರಿಗಳ ಮೇಲಿನ ಸುಂಕಗಳಿಗೆ ಕೇಂದ್ರ ಸರ್ಕಾರ ಶೀಘ್ರವೇ ಹೊಸ ನೀತಿ ಪ್ರಕಟಿಸಲಿದ್ದು, ಇದರಲ್ಲಿ ಗ್ರಾಹಕರಿಗೆ ಕೆಲವು ರಿಯಾಯಿತಿ ಸಿಗಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದರು. ಅದಿನ್ನು ಜಾರಿಯಾಗಿಲ್ಲ. ಹೀಗಾಗಿ 2008ರ ನೀತಿಯೇ ಅನ್ವಯವಾಗಲಿದೆ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಆಪರೇಟರ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ.