
ಮಂಗಳೂರು: ಎರಡೂವರೆ ವರ್ಷದ ಮಗು ಮಲಗಿದ್ದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೋಣಾಜೆ ಗ್ರಾಮದಲ್ಲಿ ನಡೆದಿದೆ.
ರುದ್ರಪ್ರತಾಪ್ ಸಿಂಗ್ ಮೃತ ಮಗು. ಉತ್ತರ ಪ್ರದೇಶ ಮೂಲದ ರಾಜಾ ಸಿಂಗ್ ಹಾಗೂ ದಿವ್ಯಾಂಶಿ ದಂಪತಿಯ ಪುತ್ರ. ಲಿಂಡೋರಾಜ್ ಎಂಬುವವರ ತೋಟದಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು. ಮಾ.25ರಂದು ಮಧ್ಯಾಹ್ನ ಮಗುವಿಗೆ ಊಟ ಮಾಡಿಸಿ ಮಲಗಿಸಿದ್ದರು. ಸಂಜೆಯದಾರೂ ಮಗು ಎದ್ದಿಲ್ಲ. ಮಗುವನ್ನು ಎಬ್ಬಿಸಲು ಯತ್ನಿಸಿದರೂ ಎಚ್ಚೆತ್ತುಕೊಂಡಿಲ್ಲ.
ಗಾಬರಿಯಾದ ಪೋಷಕರು ಕಡಬ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಆದರೂ ಪೋಷಕರು ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೂ ತಪಾಸಣೆ ನಡೆಸಿದ ವೈದ್ಯರು ಮಗು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಮಲಗಿದ್ದಲಿಯೇ ಮಗು ಸಾವನ್ನಪ್ಪಿರುವುದನ್ನು ಕಂಡು ತಂದೆ-ತಾಯಿ ಕಂಗಾಲಾಗಿದ್ದಾರೆ.
ಮಗು ಸಾವಿನ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಎರಡುವರೆ ವರ್ಷದ ಮಗು ಇದ್ದಕ್ಕಿದ್ದಂತೆ ಸಾವನ್ನಪ್ಪಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮಗು ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.