ಮುಂಬೈನ ವರ್ಸೋವಾದ ಡಿಮಾರ್ಟ್ ಸೂಪರ್ ಮಾರ್ಕೆಟ್‌ನಲ್ಲಿ ಭಾಷಾ ಸಂಘರ್ಷ ಭುಗಿಲೆದ್ದಿದೆ. ಮರಾಠಿ ಮಾತನಾಡಲು ನಿರಾಕರಿಸಿದ ಸಿಬ್ಬಂದಿಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ.
ಮಾರ್ಚ್ 26 ರ ಮಂಗಳವಾರದಂದು ವರ್ಸೋವಾದ ಡಿಮಾರ್ಟ್ ಸ್ಟೋರ್‌ಗೆ ಗ್ರಾಹಕರೊಬ್ಬರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸ್ಟೋರ್‌ನ ಉದ್ಯೋಗಿಯೊಬ್ಬರು ಗ್ರಾಹಕರೊಂದಿಗೆ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದ್ದಾರೆ. ಗ್ರಾಹಕರು ಮರಾಠಿಯಲ್ಲಿ ಮಾತನಾಡಲು ಕೇಳಿದಾಗ, ಆ ಉದ್ಯೋಗಿ “ನಾನು ಮರಾಠಿಯಲ್ಲಿ ಮಾತನಾಡುವುದಿಲ್ಲ, ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ. ನಿಮಗೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಉದ್ಧಟತನದಿಂದ ಉತ್ತರಿಸಿದ್ದಾನೆ.
ಈ ವಿಷಯ ಎಂಎನ್‌ಎಸ್ ಕಾರ್ಯಕರ್ತರಿಗೆ ತಿಳಿದ ತಕ್ಷಣ, ಪಕ್ಷದ ವರ್ಸೋವಾ ಘಟಕದ ಅಧ್ಯಕ್ಷ ಸಂದೇಶ್ ದೇಸಾಯಿ ನೇತೃತ್ವದಲ್ಲಿ ಕಾರ್ಯಕರ್ತರು ಸ್ಟೋರ್‌ಗೆ ಧಾವಿಸಿದ್ದಾರೆ. ಅಲ್ಲಿ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ನಂತರ, ಸ್ಟೋರ್ ಉದ್ಯೋಗಿ ತನ್ನ ವರ್ತನೆಗೆ ಕ್ಷಮೆಯಾಚಿಸಿದ್ದಾನೆ.