
ಹಾವೇರಿಯಲ್ಲಿ ನಡೆದ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಯುವತಿ ಸ್ವಾತಿ ಹತ್ಯೆ ಪ್ರಕರಣ ಲವ್ ಜಿಹಾದ್ ಗೆ ಬಲಿ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ವಾತಿ ಕೊಲೆ ಆರೋಪದಲ್ಲಿ ನಯಾಜ್ ಎಂಬಾತನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದರು. ಇದೀಗ ಕೊಲೆ ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ ನಯಾಜ್ ಗೆ ಸಾಥ್ ನೀಡಿದ್ದ ಇಬ್ಬರು ಹಿಂದೂ ಯುವಕರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ದುರ್ಗಾಚಾರಿ ಹಾಗೂ ವಿನಯ್ ಎಂದು ಗುರುತಿಸಲಾಗಿದೆ. ಇಬ್ಬರನು ಚಿತ್ರದುರ್ಗದ ಬಳಿ ಬಂಧಿಸಲಾಗಿದೆ. ಸ್ವಾತಿಯ ಜೊತೆ ಪ್ರೀತಿಯ ನಾಟಕವಾಡಿ ಮೋಸ ಮಾಡಲು ಯತ್ನಿಸಿದ್ದ ನಯಾಜ್ ಗೆ ಇಬ್ಬರು ಯುವಕರು ಬೆಂಬಲ ನೀಡಿದ್ದರು. ಪ್ರೀತಿ ಹೆಸರಲ್ಲಿ ಮೋಸ ಮಾಡಿದರೆ ಸುಮ್ಮನಿರಲ್ಲ ಎಂದು ಸ್ವಾತಿ ನಯಾಜ್ ಗೆ ಎಚ್ಚರಿಕೆ ನೀಡಿದ್ದಳು. ಮೂವರು ಪ್ಲಾನ್ ಮಾಡಿ ಸ್ವಾತಿಯನ್ನು ರಾಣೆಬೆನ್ನೂರಿನ ಸ್ವರ್ಣ ಪಾರ್ಕ್ ಗೆ ಕರೆಸಿಕೊಂಡಿದ್ದ ಮೂವರು ಬಳಿಕ ವಿನಯ್ ನ ಕಾರಿನಲ್ಲಿ ಆಕೆಯನ್ನು ರಟ್ಟಿಹಳ್ಳಿಗೆ ಕರೆದಿಉಕೊಂಡು ಹೋಗಿದ್ದರು. ಅಲ್ಲಿನ ಪಾಳುಬಿದ್ದ ಶಾಲೆಯಲ್ಲಿ ಸ್ವಾತಿ ಕತ್ತಿಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಅದೇ ಕಾರಿನ ಡಿಕ್ಕಿಯಲ್ಲಿ ಸ್ವಾತಿ ಮೃತದೇಹವನ್ನು ತಂದು ಪತ್ತೆಪುರ ಬಳಿಯ ತುಂಗಭದ್ರಾ ನದಿಗೆ ಎಸೆದು ಹೋಗಿದ್ದಾರೆ. ಮಾರ್ಚ್. 3ರಂದು ನಾಪತ್ತೆಯಾಗಿದ್ದ ಸ್ವಾತಿ ಮಾರ್ಚ್ 6ರಂದು ನದಿಯ ಬಳಿ ಶವವಾಗಿ ಪತ್ತೆಯಾಗಿದ್ದಳು.
ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.