ಬೆಂಗಳೂರು : ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಎಸ್ಟಿಪಿಗಳ ಗುಣಮಟ್ಟದ ಬಗ್ಗೆ ಕೇಂದ್ರ ಸರ್ಕಾರ ಜಲ್ ಹಿ ಅಮೃತ್ ಯೋಜನೆ ಅಡಿಯಲ್ಲಿ ಶ್ಲಾಘಿಸಿದೆ. 23 ಎಸ್ಟಿಪಿಗಳಿಗೆ ಕ್ಲೀನ್ ವಾಟರ್ ಕ್ರೆಡಿಟ್ನ ಅಡಿಯಲ್ಲಿ 5 ಸ್ಟಾರ್ ರೇಟಿಂಗ್ ನೀಡಿದ್ದು ಪ್ರೋತ್ಸಾಹ ಧನವಾಗಿ 103 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಮೂಲಕ ಬೆಂಗಳೂರು ಜಲಮಂಡಳಿ ಮತ್ತೊಂದು ಹೆಗ್ಗಳಿಕೆ ಪಾತ್ರವಾಗಿದೆ.
ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಅಡಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರತಿನಿತ್ಯ ಉತ್ಪತ್ತಿಯಾಗುವ 1,450 ಎಂ.ಎಲ್.ಡಿ ಯಷ್ಟು ನೀರನ್ನು ಸಂಸ್ಕರಿಸಲಾಗುತ್ತದೆ. ಇದಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ 34 ಎಸ್ಟಿಪಿಗಳನ್ನು ನಿರ್ಮಿಸಲಾಗಿದೆ. ಸಂಸ್ಕರಿಸಿದ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಏಷ್ಯಾ ಖಂಡದಲ್ಲೇ ಪ್ರಥಮ ಸ್ಥಾನದಲ್ಲಿದ್ದು, ಎಸ್ಟಿಪಿಗಳಿಂದ ಸಂಸ್ಕರಿಸಲಾಗುವ ನೀರನ್ನು ಬೆಂಗಳೂರು ಕೆರೆಗಳಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ.
ಜಲ್ ಹಿ ಅಮೃತ್ ಯೋಜನೆಯ ಅಡಿಯಲ್ಲಿ ದೇಶದ ನಗರಗಳಲ್ಲಿನ ಎಸ್ಟಿಪಿಗಳ ಗುಣಮಟ್ಟ ಪರಿಶೀಲನೆಗೆ ಅರ್ಜಿ ಸಲ್ಲಿಸಲು ಕೇಂದ್ರ ಸರಕಾರ ಅವಕಾಶ ನೀಡಿತ್ತು. ಉತ್ತಮ ಮಾನದಂಡಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ರೀತಿಯಲ್ಲಿ ನೀರಿನ ಸಂಸ್ಕರಣೆಯನ್ನು ಮಾಡುವಂತಹ ಎಸ್ಟಿಪಿಗಳಿಗೆ ಪ್ರೋತ್ಸಾಹ ಧನ ನೀಡುವ ಯೋಜನೆ ಇದಾಗಿದೆ. ಇದರಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ಜಲಮಂಡಳಿಗೆ ಅತಿಹೆಚ್ಚು ಸ್ಟಾರ್ ರೇಟಿಂಗ್ ದೊರೆಯುವ ಮೂಲಕ ಹೆಚ್ಚಿನ ಪ್ರೋತ್ಸಾಹ ಧನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು ಜಲಮಂಡಳಿ ತನ್ನ ಎಸ್ಟಿಪಿಗಳನ್ನು ಕೊಳಚೆ ನೀರನ್ನು ಸಂಸ್ಕರಿಸುವ ನಿಟ್ಟಿನಲ್ಲಿ ಅಳವಡಿಸಿಕೊಂಡಿರುವಂತಹ ಮಾನದಂಡಗಳ ಬಗ್ಗೆ ಕೇಂದ್ರ ಸರ್ಕಾರ ವಸತಿ ಮತ್ತು ನಗರಾಭಿವೃದ್ದಿ ಮಂತ್ರಾಲಯ ಶ್ಲಾಘಿಸಿದೆ. ದೇಶದಲ್ಲಿ ಗುಜರಾತ್, ಮಹಾರಾಷ್ಟ್ರ ಹೊರತುಪಡಿಸಿದರೆ ಬೆಂಗಳೂರು ಜಲಮಂಡಳಿ ಅತಿಹೆಚ್ಚು ಪ್ರೋತ್ಸಾಹ ಧನವನ್ನು ಪಡೆದುಕೊಂಡಿದೆ ಎಂದು ಸರ್ಕಾರ ಮಾಹಿತಿ ಹಂಚಿಕೊಂಡಿದೆ.