
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸುಧಾರಣೆ ತರುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ಆಯ್ಕೆ ಹಾಗೂ ಕೆಪಿಎಸ್ಸಿಗೆ ಸುಧಾರಣೆ ತರುವ ಕುರಿತು ಶಿಫಾರಸು ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಒಳಗೊಂಡ ಶೋಧನಾ ಸಮಿತಿ ರಚಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಎರಡನೇ ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಟಿ.ಎಂ. ವಿಜಯ ಭಾಸ್ಕರ್ ಅವರು ನೀಡಿರುವ ಶಿಫಾರಸಿನಂತೆ ಕೆಪಿಎಸ್ಸಿ ಸದಸ್ಯರ ಸಂಖ್ಯೆಯನ್ನು 14ರಿಂದ 8ಕ್ಕೆ ಇಳಿಸುವ ಕುರಿತು ಪರಿಶೀಲನೆ ನಡೆಸಲು ಸಂಪುಟ ತೀರ್ಮಾನ ಕೈಗೊಂಡಿದೆ.
ನೇಮಕಾತಿ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ, ಅಕ್ರಮ, ಸ್ವಜನ ಪಕ್ಷಪಾತ ಆರೋಪ ಎದುರಿಸುತ್ತಿರುವ ಕೆಪಿಎಸ್ಸಿಗೆ ಕಡಿವಾಣ ಹಾಕಲು ಕಳೆದ ಸಚಿವ ಸಂಪುಟ ಸಭೆಯಲ್ಲಿಯೇ ಕರ್ನಾಟಕ ಲೋಕಸೇವಾ ಆಯೋಗ(ವ್ಯವಹಾರ ನಿರ್ವಹಣೆ ಮತ್ತು ಹೆಚ್ಚುವರಿ ಪ್ರಕಾರ್ಯಗಳು) ಕಾಯ್ದೆ 1959 ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿತ್ತು. ಈವರೆಗೆ ಕೆಪಿಎಸ್ಸಿ ಕುರಿತ ಯಾವುದೇ ನಿಯಮಾವಳಿ ರೂಪಿಸಲು ಸರ್ಕಾರ ಕೆಪಿಎಸ್ಸಿ ಜತೆ ಸಮಾಲೋಚನೆ ನಡೆಸಬೇಕೆಂಬ ತೀರ್ಮಾನವಿತ್ತು. ಇದನ್ನು ತೆಗೆದುಹಾಕಲು ತೀರ್ಮಾನಿಸಿ ಕೆಪಿಎಸ್ಸಿಗೆ ನಿಯಮಾವಳಿ ರೂಪಿಸಲಾಗುವುದು ಎನ್ನಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಲೋಪ ದೋಷಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುಧಾರಣಾ ಕ್ರಮಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗಿದೆ. ಕೆಪಿಎಸ್ಸಿ ಪರೀಕ್ಷೆ, ಆಡಳಿತ ಸುಧಾರಣೆಗೆ ಪ್ರತ್ಯೇಕ ಸಮಿತಿ ರಚಿಸಲಾಗುವುದು. ಇದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಮಿತಿ ಶಿಫಾರಸು ಪಾಲನೆ ಮಾಡುವ ಕುರಿತಾಗಿಯೂ ಚರ್ಚೆ ನಡೆದಿದೆ. ಕರ್ನಾಟಕ ಲೋಕಸೇವಾ ಆಯೋಗದ ಸಮಗ್ರ ಸುಧಾರಣೆಗೆ ಕ್ರಮ ಕೈಗೊಳ್ಳಲು ಮುಂದಿನ ಅಧಿವೇಶನದ ವೇಳೆಗೆ ವಿಧೇಯಕ ಮಂಡನೆ ಮಾಡುವ ಸಾಧ್ಯತೆ ಇದೆ. ಸಮಗ್ರ ಸುಧಾರಣಾ ವಿಧೇಯಕ ಮಂಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.