
ಬೆಂಗಳೂರು: ಕೇಂದ್ರ ಸರ್ಕಾರದ ನಿಯಮದಂತೆ ನೋಟರಿಗಳ ನೇಮಕವಾಗುವುದರಿಂದ ನೇಮಕಾತಿಯಲ್ಲಿ ಮೀಸಲಾತಿಗೆ ಅವಕಾಶವಿಲ್ಲ. ಹೀಗಾಗಿ ರಾಜ್ಯ ಸರ್ಕಾರ ನೋಟರಿ ನೇಮಕದಲ್ಲಿ ಮೀಸಲಾತಿ ಕಲ್ಪಿಸಲು ಕಾನೂನು ಮಾಡಬಹುದೇ ಎನ್ನುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರಾದ ಬಲ್ಕಿಶ್ ಬಾನು ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕೇಂದ್ರ ಸರ್ಕಾರದ ನೋಟರಿಗಳ ಕಾಯ್ದೆ 1952, ನೋಟರಿಗಳ ನಿಯಮಗಳು 1956 ರಲ್ಲಿ ನೋಟರಿ ಹುದ್ದೆಗಳ ನೇಮಕದಲ್ಲಿ ಯಾವುದೇ ಪ್ರವರ್ಗ ಹಾಗೂ ಜಿಲ್ಲಾವಾರು ಮೀಸಲಾತಿ ಕಲ್ಪಿಸಿರುವುದಿಲ್ಲ. ಆದರೆ, ಸರ್ಕಾರದ ವಿವೇಚನೆಯ ಮೇರೆಗೆ ನೇಮಕಾತಿ ಮಾಡಲು ಅವಕಾಶವಿದೆ. ನೋಟರಿಗಳು ತಪ್ಪು ಮಾಡಿದರೆ ಕ್ರಮ ಕೈಗೊಳ್ಳಲು ವರದಿಗಾಗಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.