
ನವದೆಹಲಿ: ಮಧುಮೇಹಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ, ಮಧುಮೇಹಿಗಳು ಬಳಸುವ ಎಂಪಾಗ್ಲಿಪ್ಲೋಜಿನ್ ಮಾತ್ರೆಯ ಬೆಲೆ ಶೇಕಡ 90ರಷ್ಟು ಕಡಿತವಾಗಿದೆ. ಔಷಧದ ಪೇಟೆಂಟ್ ಅವಧಿ ಮುಗಿದ ಕಾರಣ ಅನೇಕ ಕಂಪನಿಗಳು ಜನೆರಿಕ್ ಮಾದರಿಯನ್ನು ಬಿಡುಗಡೆ ಮಾಡಿದೆ. ಇದರಿಂದಾಗಿ 60 ರೂಪಾಯಿ ಇದ್ದ ಒಂದು ಮಾತ್ರೆ ಈಗ ಐದು ರೂಪಾಯಿ ದರದಲ್ಲಿ ಸಿಗಲಿದೆ.
ಎಂಪಾಗ್ಲಿಪ್ಲೋಜಿನ್ ಮೇಲೆ ತಯಾರಿಕಾ ಕಂಪನಿಯಾದ ಬೋರಿಂಜರ್ ಇಂಗ್ಲ್ ಹೈ ಹೊಂದಿದ್ದ ಪೇಟೆಂಟ್ ಅವಧಿ ಮಾರ್ಚ್ ಗೆ ಮುಕ್ತಾಯವಾಗಿದೆ. ಹೀಗಾಗಿ ಅನೇಕ ಕಂಪನಿಗಳು ಇದರ ಜನೆರಿಕ್ ಮಾದರಿ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇದರಿಂದಾಗಿ ದೇಶದ ಕೋಟ್ಯಂತರ ರೋಗಿಗಳಿಗೆ ಬೆಲೆ ಇಳಿಕೆಯಿಂದ ಅನುಕೂಲವಾಗಲಿದೆ.
ದೆಹಲಿ ಮೂಲದ ಮ್ಯಾನ್ ಕೈಂಡ್ ಫಾರ್ಮಾ ಒಂದು ಮಾತ್ರೆಗೆ 5.5 ರೂ. ನಿಂದ 13.5 ರೂ.ವರೆಗೆ ದರ ಇರಿಸಿದೆ. ಮುಂಬೈ ಮೂಲಕ ಗ್ಲೆನ್ ಮಾರ್ಕ್ 11 ರಿಂದ 15 ರೂ. ವರೆಗೆ ಮಾತ್ರೆ ಬೆಲೆ ನಿಗದಿಪಡಿಸಿದೆ. ಆಲ್ಕೆಮ್ ಕಂಪನಿ ಮಾರುಕಟ್ಟೆ ದರಕ್ಕಿಂತ ಶೇಕಡ 80ರಷ್ಟು ಕಡಿಮೆ ಬೆಲೆ ನಿಗದಿ ಮಾಡಿದೆ.
ಮಧುಮೇಹ, ಹೃದಯ ವೈಫಲ್ಯ ಸೇರಿದಂತೆ ಸಂಬಂಧಿತ ಸಹವರ್ತಿ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ ಜೆನೆರಿಕ್ ಎಂಪಾಗ್ಲಿಫ್ಲೋಜಿನ್ ಬಿಡುಗಡೆಯು ಚಿಕಿತ್ಸಾ ವೆಚ್ಚವನ್ನು ಕಡಿತಗೊಳಿಸುವ ಭರವಸೆ ನೀಡುತ್ತದೆ. ಆರ್ಥಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. 10.1 ಕೋಟಿ ಭಾರತೀಯರು ಮಧುಮೇಹದಿಂದ ಬಳಲುತ್ತಿದ್ದಾರೆ.