
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾದಕವಸ್ತುಗಳು ಸರಬರಾಜಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ವಿಶೆಷ ಶ್ವಾನದಳ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಮಾಹಿತಿ ನೀಡಿದ ಸಚಿವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾದಕ ವಸ್ತುಗಳ ಪತ್ತೆ ಮಾಡಲು ವಿಶೇಷ ಶ್ವಾನದಳ ಸ್ಥಾಪಿಸಲಾಗಿದೆ. ಸಿಬ್ಬಂದಿಗಳ ವಿರುದ್ಧ ಕರ್ತವ್ಯಲೋಪಗಳ ದೂರು ಬಂದಿರುವುದರಿಂದ ಬಿಗಿ ತಪಾಸಣೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಜೈಲಿನಲ್ಲಿ ಮಾದಕ ವಸ್ತು ಪತ್ತೆ ಹಚ್ಚಲು ಬೆಲ್ಜಿಯಂ ತಳಿಯ ಎರಡು ಶ್ವಾನ ಖರೀದಿಸಿ ತರಬೇತಿ ನೀಡಿ ಶ್ವಾನದಳ ಸ್ಥಾಪಿಸಲಾಗಿದೆ ಎಂದು ಹೇಳಿದರು.
ಕಾರಾಗೃಹಗಳಲ್ಲಿ ಕೈದಿಗಳು ಮೊಬೈಲ್, ನಿಷೇಧಿತ ವಸ್ತುಗಳನ್ನು ಬಳಸದಂತೆ ತಡೆಯಲು ರಾಜ್ಯದ ಕೇಂದ್ರ ಕಾರಾಗೃಹಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಬಳ್ಳಾರಿ, ಧಾರವಾಡ, ವಿಜಯಪುರ, ಕಲಬುರಗಿ, ಶಿವಮೊಗ್ಗ ಹಾಗೂ ಮಂಗಳೂರು ಜಿಲ್ಲಾ ಕಾರಾಗೃಹಗಳಿಗೆ ಈಗಾಗಲೇ ಕೆ ಎಸ್ ಐ ಎಫ್ ಸಿಬ್ಬಂದಿ ನಿಯೋಜಿಸಲಾಗಿದೆ. ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಅತ್ಯಾಧುನಿಕ 280 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆ ಹಾಗೂ ತಪಾಸಣೆಗಾಗಿ 9 ಯಾಗೇಜ್ ಸ್ಕ್ಯಾನರ್, 350 ವಾಕಿಟಾಕಿ ಖರೀದಿಸಲಾಗಿದೆ ಎಂದು ವಿವರಿಸಿದರು.