
ಬೆಂಗಳೂರು: ನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ರಾಜ್ಯ ಸರ್ಕಾರ ನಟಿಗೆ ಕೀನ್ ಚಿಟ್ ಕೊಟ್ಟರೂ ಅಚ್ಚರಿಯಿಲ್ಲ ಎಂದು ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಬಾಬು, ಗೃಹ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ. ದಕ್ಷ ಅಧಿಕಾರಿಗಳು ಇದ್ದರೂ ಸರ್ಕಾರ ಸರಿಯಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಪೊಲೀಸರ ರಕ್ಷಣೆಯಲ್ಲಿಯೇ ರನ್ಯಾ ರಾವ್ ಓಡಾಡಿದ್ದಾಳೆ. 14 ಕೆಜಿ ಚಿನ್ನ ಸಾಗಾಣೆ ಮಾಡಿದ್ದಾರೆ ಅಂದರೆ ಗೃಹ ಇಲಾಖೆ ಇದರಲ್ಲಿ ಶಾಮೀಲಾಗಿದೆಯಾ ಎಂಬ ಅನುಮಾನವಿದೆ. ಸಿಐಡಿ ತನಿಖೆ ಯಾಕೆ ವಾಪಾಸ್ ಪಡೆದರು? ಎಂದು ಪ್ರಶ್ನಿಸಿದ್ದಾರೆ.
ರನ್ಯಾ ರಾವ್ ಉಳಿಸಲು ಈ ಸರ್ಕಾರದವರು ಮುಡಾ ಸೈಟ್ ಕೇಸ್ ನಲ್ಲಿ ಸೈಟ್ ಗಳನ್ನು ವಾಪಾಸ್ ಕೊಟ್ಟಂತೆ ಚಿನ್ನವನ್ನು ದುಬೈಗೆ ಹೋಗಿ ವಾಪಾಸ್ ಇಟ್ಟು ಬಾ ಅಂದರೂ ಆಶ್ಚರ್ಯ ಇಲ್ಲ ಎಂದು ವ್ಯಂಗ್ಯವಾಡಿದರು .
ರನ್ಯಾ ರಾವ್ ಕೇಸ್ ನಲ್ಲಿ ಇಬ್ಬರು ಸಚಿವರ ಹೆಸರು ಕೇಳಿಬರುತ್ತಿದೆ. ಆ ಸಚಿವರು ಯಾರು ಎಂಬುದು ತನಿಖೆಯಾಗಬೇಕು ಎಂದು ಆಗ್ರಹಿಸಿದರು.