ಡೊಮಿನಿಕನ್ ಗಣರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದು, ಆಕೆಯ ಕೊನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸುದೀಕ್ಷಾ ಕೋನಂಕಿ ಎಂಬ 20 ವರ್ಷದ ವಿದ್ಯಾರ್ಥಿನಿ ಕಡಲತೀರದಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದು, ಆಕೆ ಕೊನೆಯದಾಗಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಪಿಟ್ಸ್ಬರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ಸುದೀಕ್ಷಾ, ಐವರು ಸ್ನೇಹಿತರೊಂದಿಗೆ ರಜೆ ಕಳೆಯಲು ಡೊಮಿನಿಕನ್ ಗಣರಾಜ್ಯಕ್ಕೆ ತೆರಳಿದ್ದರು. ಗುರುವಾರ ರಾತ್ರಿ, ಸ್ನೇಹಿತರೊಂದಿಗೆ ಪಾರ್ಟಿ ಮುಗಿಸಿ ಕಡಲತೀರಕ್ಕೆ ತೆರಳಿದ್ದರು. ಬೆಳಿಗ್ಗೆ 5:50 ರ ವೇಳೆಗೆ, ಹೆಚ್ಚಿನ ಸ್ನೇಹಿತರು ಮರಳಿದ್ದರಾದರೂ, ಸುದೀಕ್ಷಾ ಮತ್ತು ಜೋಶುವಾ ಸ್ಟೀವನ್ ರಿಬೆ ಎಂಬ ಸ್ನೇಹಿತರು ಮಾತ್ರ ಉಳಿದುಕೊಂಡಿದ್ದರು.
ಜೋಶುವಾ ಸ್ಟೀವನ್ ರಿಬೆ, ಸುದೀಕ್ಷಾ ಕಣ್ಮರೆಯಾದ ಬಗ್ಗೆ ಮೂರು ಬಾರಿ ಹೇಳಿಕೆ ಬದಲಾಯಿಸಿದ್ದಾನೆ. ಇದರಿಂದ, ಆತನ ಮೇಲೆ ಸಂಶಯ ಹೆಚ್ಚಾಗಿದೆ. ಸುದೀಕ್ಷಾ ಕೊನೆಯದಾಗಿ ಬ್ರೌನ್ ಬಿಕಿನಿ ಧರಿಸಿ ಸಮುದ್ರದಲ್ಲಿ ಈಜುತ್ತಿದ್ದುದು ಮತ್ತು ಆಕೆಯ ಬಟ್ಟೆಗಳು ಕಡಲತೀರದಲ್ಲಿ ಪತ್ತೆಯಾಗಿವೆ.
ಸುದೀಕ್ಷಾ ನಾಪತ್ತೆಯಾಗಿ ಆರು ದಿನಗಳಾಗಿದ್ದು, ಆಕೆ ಮುಳುಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ, ಆಕೆಯ ಕುಟುಂಬದವರು ಆಕೆಯನ್ನು ಅಪಹರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.