
ಅಹಮದಾಬಾದ್: ಕೆಲವು ಕಾಂಗ್ರೆಸ್ ನಾಯಕರು ಮತ್ತು ಮುಖಂಡರು ಬಿಜೆಪಿ ಪರವಾಗಿ ಸ್ಲೀಪರ್ ಸೆಲ್ ಗಳ ರೀತಿ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಪಕ್ಷದಿಂದ ಹೊರಗಿಡುವ ಅಗತ್ಯವಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಶನಿವಾರ ಅಹಮದಾಬಾದ್ ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪರ ಕೆಲಸ ಮಾಡುತ್ತಿರುವವರನ್ನು ಪಕ್ಷದಿಂದ ಹೊರಗಾಕುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರಲ್ಲಿ ಎರಡು ಗುಂಪುಗಳಿವೆ. ಪಕ್ಷದ ಸಿದ್ಧಾಂತವನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ಸದಾ ಸಾರ್ವಜನಿಕರೊಂದಿಗೆ ನಿಲ್ಲುವವರು ಒಂದು ಗುಂಪಿನಲ್ಲಿದ್ದರೆ, ಸಾರ್ವಜನಿಕರಿಂದ ಸಂಪರ್ಕ ಕಳೆದುಕೊಂಡ ಮತ್ತೊಂದು ಗುಂಪು ಬಿಜೆಪಿಯ ಜೊತೆಗಿದ್ದಾರೆ. ಅಂಥವರನ್ನು ಪಕ್ಷದಿಂದ ಬೇರ್ಪಡಿಸುವುದು ಮೊದಲ ಕೆಲಸವಾಗಿದೆ ಎಂದು ಹೇಳಿದ್ದಾರೆ.